ಮೈಸೂರು; ಬಿಜೆಪಿ ವಕ್ತಾರೆ ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧಿಸುವಂತೆ ಒತ್ತಾಯಿಸಿ ಎಸ್‍ಡಿಪಿಐ ಪ್ರತಿಭಟನೆ

Update: 2022-06-10 18:25 GMT

ಮೈಸೂರು,ಜೂ.10: ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಮತ್ತು ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್‍ರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮಿಲಾದ್ ಪಾರ್ಕ್ ಎದುರು ಶುಕ್ರವಾರ ವಿಶೇಷ ಪ್ರಾರ್ಥನೆ ಬಳಿಕ ಜಮಾಯಿಸಿದ ಸಾವಿರಾರು ಮುಸಲ್ಮಾನರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರವಾದಿ ನಿಂದಕರನ್ನು ಗಲ್ಲಿಗೇರಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಬಿಜೆಪಿ ದೇಶಾದ್ಯಂತ ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗ ವಿರೋಧಿ ಅಲೆ ಸೃಷ್ಟಿಸುತ್ತಿದೆ. ಸಂಘ ಪರಿವಾರ ದೇಶದಲ್ಲಿ ಸೃಷ್ಟಿಸುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಕ್ಕೆ ಬಿಜೆಪಿ ಸರ್ಕಾರಗಳು ಮೌನ ಸಮ್ಮತಿ ಸೂಚಿಸಿ ಎಲ್ಲಾ ಆಡಳಿತಾತ್ಮಕ ನೆರವನ್ನೂ ನೀಡುತ್ತಿದೆ ಎಂದು ಕಿಡಿಕಾರಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸರ್ಕಾರ ದೇಶದ ಘನತೆಯನ್ನು ಹಾಳು ಮಾಡುತ್ತಿದೆ. ಈ ಹಿಂದೆ ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ, ಆಝಾನ್, ಈದ್ಗಾಗಳ ವಿವಾದ ಸೃಷ್ಟಿ ಮಾಡಿ ಜನರ ನೆಮ್ಮದಿ ಕೆಡಿಸಿತ್ತು. ಈಗ ತನ್ನ ರಾಷ್ಟ್ರೀಯ ವಕ್ತಾರರ ಮೂಲಕ ಮಾಧ್ಯಮ ಚರ್ಚೆಯಲ್ಲಿ ಪ್ರವಾದಿಗಳನ್ನು ನಿಂದಿಸಲು ಸರ್ಕಾರವೇ ಪ್ರಚೋದನೆ ನೀಡಿ ನಿರಂತರವಾಗಿ ಮುಸಲ್ಮಾನರ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ  ನಡೆಸುತ್ತಾ ಅಶಾಂತಿ ಸೃಷ್ಟಿಸುತ್ತಿದೆ. ಬಿಜೆಪಿ ಹಾಗೂ ಹಿಂದುತ್ವ ನಾಯಕರು ದ್ವೇಷ ಭಾಷಣ, ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದರೂ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ. ಜತೆಗೆ ಕೃತ್ಯವನ್ನು ಖಂಡಿಸುವ ಮಾತುಗಳಾಡಿಲ್ಲ. ಪ್ರವಾದಿ ನಿಂದನೆಯ ಪ್ರಕರಣದಲ್ಲಿ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ನುಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್‍ರನ್ನು ಪಕ್ಷದಿಂದ ವಜಾಗೊಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ರಫತ್ ಖಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫಿಉಲ್ಲಾ,  ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ನಗರಪಾಲಿಕೆ ಮಾಜಿ ಸದಸ್ಯ ಎಸ್.ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News