ಮುಖದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದೇನೆ: ಶೋ ರದ್ದತಿ ಕುರಿತು ಅಭಿಮಾನಿಗಳಿಗೆ ಕಾರಣ ನೀಡಿದ ಜಸ್ಟಿನ್ ಬೀಬರ್

Update: 2022-06-11 05:59 GMT
ಜಸ್ಟಿನ್ ಬೀಬರ್ (Photo: instagram.com/justinbieber)

ನ್ಯೂಯಾರ್ಕ್: ಖ್ಯಾತ ಪಾಪ್ ತಾರೆ, 28 ವರ್ಷದ ಜಸ್ಟಿನ್ ಬೀಬರ್ ಅವರು ಇನ್‍ಸ್ಟಾಗ್ರಾಂ ಪೋಸ್ಟ್ ಮೂಲಕ ತಮ್ಮ ಅರೋಗ್ಯ ಸಮಸ್ಯೆಯ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮಗೆ ರಾಮ್ಸೇ ಹಂಟ್ ಸಿಂಡ್ರೋಮ್ ಇರುವುದು ದೃಢಪಟ್ಟಿದೆ ಇದರಿಂದ ಮುಖದ ಒಂದು ಭಾಗ ಪಾರ್ಶ್ವವಾಯು ಪೀಡಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಟೊರೊಂಟೋದಲ್ಲಿ ನಡೆಯಬೇಕಿದ್ದ ಸಂಗೀತ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳಿರುವಾಗ ಇತ್ತೀಚೆಗೆ ಅವರು ತಮ್ಮ ಜಸ್ಟಿಸ್ ವಲ್ರ್ಡ್ ಟೂರ್ ಅನ್ನು ಆರೋಗ್ಯ ಕಾರಣಗಳಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದ್ದರು. ಇದೀಗ ಯಾವ ಆರೋಗ್ಯ ಸಮಸ್ಯೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ನೀವು ನೋಡುತ್ತಿದ್ದೀರಿ, ನನ್ನ ಈ ಕಣ್ಣ ರೆಪ್ಪೆ ಹೊಡೆಯುವುದಿಲ್ಲ. ಈ ಭಾಗದಲ್ಲಿ ನಗುವುದೂ ಸಾಧ್ಯವಿಲ್ಲ, ಈ ಭಾಗದ ಮೂಗಿನ ಹೊಳ್ಳೆ ಕೂಡ ಅಲುಗಾಡುವುದಿಲ್ಲ, ಮುಖದ ಈ ಭಾಗ ಪಾರ್ಶ್ವವಾಯು ಪೀಡಿತವಾಗಿದೆ. ನನ್ನ ಮುಂದಿನ ಶೋಗಳ ರದ್ದತಿಯಿಂದ ನಿರಾಸೆಯುಂಟಾದವರಿಗೆ ಹೇಳುತ್ತಿದ್ದೇನೆ, ಈ ಶೋಗಳನ್ನು ನಡೆಸುವುದು  ನನಗೆ ಸಾಧ್ಯವಿಲ್ಲ, ಇದು ಗಂಭೀರ ಸಮಸ್ಯೆ, ನೀವೇ ನೋಡುತ್ತಿದ್ದೀರಿ,'' ಎಂದು ವೀಡಿಯೋವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ತಾನು ಮುಖದ ವ್ಯಾಯಾಮಗಳನ್ನು ಮಾಡುತ್ತಿರುವುದಾಗಿ ಹಾಗೂ ಮತ್ತೆ ಮುಂದಿನಂತಾಗಲು ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ ಅವರು ಆರೋಗ್ಯ ಸುಧಾರಿಸಲು ಎಷ್ಟು ಸಮಯ ಬೇಕೆಂದು ಹೇಳಿಲ್ಲ.

ರಾಮ್ಸೇ ಹಂಟ್ ಸಿಂಡ್ರೋಮ್ ಎಂಬುದು ಶಿಂಗಲ್ಸ್ ಅಥವಾ ಸರ್ಪಸುತ್ತು ಕಾಯಿಲೆಯ ಅಡ್ಡ ಪರಿಣಾಮವಾಗಿದ್ದು ಇದು ಕಿವಿಯ ಸಮೀಪದ ಮುಖದ ನರವನ್ನು ಬಾಧಿಸಿದಾಗ ಹೀಗಾಗುತ್ತದೆ ಹಾಗೂ ಕಿವುಡುತನಕ್ಕೂ ಕಾರಣವಾಗಬಹುದು.

ಜಸ್ಟಿನ್ ಬೀಬರ್ ಅವರ ಮೊದಲ ಎರಡು ಕಾರ್ಯಕ್ರಮಗಳು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದರೆ ಮೂರನೆಯದು ಅವರ ಅರೋಗ್ಯ ಸಮಸ್ಯೆಗಳಿಂದ ಮುಂದೂಡಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News