ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ: ಉಡುಪಿ ಜಿಲ್ಲೆ ಪ್ರವೇಶಿಸಿದ ಶಿಹಾಬ್ ಚೊಟ್ಟೂರು

Update: 2022-08-03 03:26 GMT

ಕಾಪು: ಜೂನ್ 2ರಂದು ಕೇರಳದ ಮಲ್ಲಪ್ಪುರಂ ಜಿಲ್ಲೆಯಿಂದ ಕಾಲ್ನಡಿಗೆಯಲ್ಲಿ 2023ರ ಪವಿತ್ರ ಹಜ್ ಯಾತ್ರೆಗೆ ಹೊರಟ ಶಿಹಾಬ್ ಚೊಟ್ಟೂರು ( shihab chottur ) ಶನಿವಾರ ಉಡುಪಿ ಜಿಲ್ಲೆ ಪ್ರವೇಶಿಸಿದ್ದಾರೆ.

ದ.ಕ. ಜಿಲ್ಲೆಯ ಮುಲ್ಕಿಯಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಅಲ್ಲಿಂದ ಆರು ಗಂಟೆಗೆ ಹೊರಟು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಗೆ ಆಗಮಿಸಿದರು. ಅವರನ್ನು ಕಣ್ಣಂಗಾರ್ ಜುಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಕಿನ್ಯ ಸ್ವಾಗತಿಸಿದರು.

ಮೂಳೂರು ಕೇಂದ್ರ ಜುಮಾ ಮಸೀದಿಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ ಅವರು ಸುಮಾರು ಅರ್ಧ ಗಂಟೆ ವಿಶ್ರಾಂತಿ ಪಡೆದು ನಂತರ ತಮ್ಮ ಕಾಲ್ನಡಿಗೆ ಯಾತ್ರೆಯನ್ನು ಮುಂದುವರಿಸಿದರು. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನರು ಅವರನ್ನು ಕುತೂಹಲದಿಂದ ನೋಡಲು ಸಾಲುಗಟ್ಟಿ ನಿಂತಿದ್ದರು. ಯುವಕರು, ವೃದ್ಧರೂ, ಮಕ್ಕಳು ಅವರೊಂದಿಗೆ ಹೆಜ್ಜೆ ಹಾಕಿ ಅವರ ಯಾತ್ರೆಗೆ ಸಾಥ್ ನೀಡಿದರು.

7 ವರ್ಷಗಳ ಕನಸು

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಿಹಾಬ್, ಕಾಲ್ನಡಿಗೆಯಲ್ಲಿ ತೆರಳಿ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ನನ್ನ ಏಳು ವರ್ಷದ ಕನಸಾಗಿತ್ತು. ಮುಂದಿನ ವರ್ಷದ ಹಜ್‌ಗಾಗಿ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದೇನೆ. ಪಾಕಿಸ್ತಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮೂಲಕ ಮಕ್ಕಾ ತಲುಪಲಿದ್ದು, 8640 ಕಿಮೀ ಕ್ರಮಿಸಲಿದ್ದೇನೆ ಎಂದರು.‌

ಉಡುಪಿ ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಸದಸ್ಯ ಇಕ್ಬಾಲ್ ಕಟಪಾಡಿ ಮಾತನಾಡಿ, ನೂರು ವರ್ಷಗಳ ಹಿಂದೆ ಅಂದು ಈಗಿನಷ್ಟು ಸಂಪರ್ಕ ವ್ಯವಸ್ಥೆ ಇಲ್ಲದ ಸಮಯದಲ್ಲಿ ನಮ್ಮ ಹಿರಿಯರು ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡಿದ್ದರು. ಇತ್ತೀಚಿನ ಆಧುನಿಕ ವ್ಯವಸ್ಥೆ ಇರುವ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಹಜ್‌ಗೆ ಯಾತ್ರೆ ಕೈಗೊಂಡಿರುವುದು ನಮಗೆ ತಿಳಿದಿಲ್ಲ. 8000 ಕಿಮೀ ನಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳುವುದು ಸಾಹಸವಾಗಿದೆ. ಇವರ ಯಾತ್ರೆ ಒಳ್ಳೆಯ ರೀತಿಯಲ್ಲಿ ನಡೆಯಲಿದೆ ಎಂದು ಹಾರೈಸಿದರು.

ಶಿಹಾಬ್ ಅವರು ಪ್ರಚಾರಕ್ಕಾಗಿ ಈ ಯಾತ್ರೆಯನ್ನು ಕೈಗೊಂಡಿಲ್ಲ. ಅವರ ಒಂದು ಕನಸು ನಸಾಗಬೇಕು ಎಂದು ಹಜ್ ಯಾತ್ರೆಗೆ ಹೊರಟಿದ್ದಾರೆ. ಯಾರೂ ಟ್ರೋಲ್, ಕಮೆಂಟ್ ಮಾಡಬೇಡಿ. ಅವರನ್ನು ಹಿಂಬಾಲಿಸಿಕೊಂಡು ಅವರ ಯಾತ್ರೆಗೆ ಅಡ್ಡಿಯಾಗಬೇಡಿ ಎಂದು ಇಕ್ಬಾಲ್ ಕಟಪಾಡಿ ವಿನಂತಿಸಿಕೊಂಡರು.

ಮೂಳೂರಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮೂಳೂರು ಜುಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಕ್ಕಿಂಜೆ ಅಭಿನಂಸಿದಿರು. ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಉಡುಪಿ ಜಿಲ್ಲಾ ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲಾ ಅಧ್ಯಕ್ಷ ಬಿ.ಎಸ್.ಎಫ್ ರಫೀಕ್, ಅಲ್ ಇಹ್ಸಾನ್ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ, ಕಟಪಾಡಿ ಜುಮಾ ಮಸೀದಿಯ ಅಧ್ಯಕ್ಷ ಮುಹಿಯುದ್ದೀನ್, ಕಾರ್ಯದರ್ಶಿ ಎಸ್.ಆರ್ ರಫೀಕ್, ಕೋಶಾಧಿಕಾರಿ ಎನ್.ಎಸ್. ಅಬ್ದುಲ್ ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕಡೆಗಳಲ್ಲಿ ಅಭಿನಂದನೆ: ಪಡುಬಿದ್ರಿಯಲ್ಲಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಶಾಲು ಹೊಂದಿಸಿ ಅಭಿನಂದಿಸಿದರು. ಉಚ್ಚಿಲದಲ್ಲಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹ್ಮದ್‌ ಮುಲ್ಕಿ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದರು. ಅಲ್‌ ಇಹ್ಸಾನ್ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ಸಂಸ್ಥೆಯ ಮ್ಯಾನೇಜರ್ ಮುಸ್ತಫಾ ಸಅದಿ ಶಾಲು ಹೊದಿಸಿ ಅಭಿನಂದಿಸಿದರು. ಕಾಪುವಿನಲ್ಲಿ ದಫ್ ವಿದ್ಯಾರ್ಥಿಗಳು ದಫ್ ಮೂಲಕ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News