ಗ್ರೀಷ್ಮ ರಂಗೋತ್ಸವದಲ್ಲಿ ಬೇಕಂತಲೇ ಆರೆಸ್ಸೆಸ್ ವಿಚಾರ ಚರ್ಚೆಗಿಟ್ಟಿದ್ದೇವೆ: ಅಡ್ಡಂಡ ಕಾರ್ಯಪ್ಪ

Update: 2022-06-11 11:09 GMT

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ ಆಹ್ವಾನಿಸಿ ವಿವಾದಕ್ಕೆ ಕಾರಣವಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ,  ಜೂ. 12ರಿಂದ ಆರಂಭವಾಗಲಿರುವ ಗ್ರೀಷ್ಮ ರಂಗೋತ್ಸವದಲ್ಲಿ ಬೇಕಂತಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ( ಆರೆಸ್ಸೆಸ್) ಚರ್ಚೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ. 

ನಾಟಕೋತ್ಸವದ ಕುರಿತು ಮಾಹಿತಿ ನೀಡಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಗ್ರೀಷ್ಮ ರಂಗೋತ್ಸವದಲ್ಲಿ ಆರೆಸ್ಸೆಸ್  ಕುರಿತಾದ ವಿಷಯದ ಚರ್ಚೆ ಅಗತ್ಯವಿತ್ತೇ? ರಂಗಾಯಣಕ್ಕೂ ಸಂಘ ಪರಿವಾರಕ್ಕೂ ಏನು ಸಂಬಂಧ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಸಂಘ ಪರಿವಾರದ ಕುರಿತು ಚರ್ಚೆಯಾಗುತ್ತಿದೆ. ಅದರ ಬಗ್ಗೆ ತಿಳಿಯಲೆಂದು ವಿಚಾರ ಪ್ರಸ್ತಾಪ ಮಾಡಿದ್ದೇವೆ ಎಂದರು. 

ವಿವಾದ ಬೆಳೆಸಲೆಂದು ಈ ವಿಚಾರವನ್ನು ತರಲಾಗಿದೆಯೇ? ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ವಿವಾದವಿಲ್ಲದೇ ಏನಾದರೂ ಸಾಧ್ಯವಾಗುತ್ತದೆಯೇ? 32 ವರ್ಷಗಳಿಂದ ರಂಗಾಯಣದಲ್ಲಿ ಏನು ಚರ್ಚೆ ನಡೆದಿದೆ ನಿಮಗೂ ಗೊತ್ತಿದೆ. ಆರೆಸ್ಸೆಸ್ ಕುರಿತು ಚರ್ಚೆಯಾದರೇ ತಪ್ಪೇನು? ಎಂದು ಪ್ರಶ್ನಿಸಿದರು. 

ಆರೆಸ್ಸೆಸ್ ಪ್ರಾಂತೀಯ ಸರ ಸಂಚಾಲಕರಾದ ಮಾ.ವೆಂಕಟರಾಮ್‌ ಅವರು ದಲಿತ ಸಮು ದಾಯಕ್ಕೆ ಸೇರಿದವರಾಗಿದ್ದಾರೆ. ನಾನೇಕೆ ಆರೆಸ್ಸೆಸ್ ನಲ್ಲಿ ಇದ್ದೇನೆ ಎಂಬ ವಿಷಯದ ಕುರಿತು ಮಾತಾಡಲಿದ್ದಾರೆ. ಸಂವಾದದ ವೇಳೆ ಅವರಿಗೆ ಪ್ರಶ್ನೆ ಕೇಳಬಹುದು. ಚರ್ಚೆಯಾದರೇ ತಪ್ಪೇನು? ರಂಗಾಯಣದಲ್ಲಿ ಒಂದೇ ವಿಚಾರ ಚರ್ಚೆಯಾಗಬೇಕೆ? ಎಂದೂ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News