×
Ad

ನಿರ್ವಹಣೆ ಇಲ್ಲದ ಚರಂಡಿಗಳು; ಚಿಕ್ಕಮಗಳೂರಿನ ಗಿರಿಶ್ರೇಣಿಗಳಲ್ಲಿ ಭೂಕುಸಿತದ ಆತಂಕ

Update: 2022-06-11 19:29 IST

ಚಿಕ್ಕಮಗಳೂರು, ಜೂ.11: ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಕಾಫಿನಾಡಿನ ರಮಣೀಯ ಗಿರಿಶ್ರೇಣಿಗಳಾಗಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ಈ ಗಿರಿಶ್ರೇಣಿಗೆ ಸಾಗುವ ರಸ್ತೆ ಬದಿಯಲ್ಲಿ ಭೂ ಕುಸಿತದಂತಹ ಪ್ರಾಕೃತಿಕ ವಿಕೋಪಗಳು ಮಳೆಗಾಲದಲ್ಲಿ ಸಾಮಾನ್ಯ ಎಂಬಂತಾಗಿದೆ. ಈ ಭಾಗದಲ್ಲಿ ಪ್ರತೀ ಮಳೆಗಾಲದಲ್ಲಿ ಭೂ ಕುಸಿತಕ್ಕೆ ಕಾರಣ ರಸ್ತೆ ಬದಿಯಲ್ಲಿರುವ ಚರಂಡಿಗಳ ಅಸಮರ್ಪಕ ನಿರ್ವಹಣೆ ಎಂಬುದು ಇಲ್ಲಿನ ಸಾರ್ವಜನಿಕರ ದೂರಾಗಿದ್ದು, ಸದ್ಯ ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಗಿರಿಶ್ರೇಣಿಗಳತ್ತ ಸಾಗುವ ರಸ್ತೆ ಬದಿಯಲ್ಲಿರುವ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಳ್ಳಯ್ಯನಗಿರಿ ರಾಜ್ಯದ ಅತ್ಯಂತ ಎತ್ತರವಾದ ಗಿರಿಶ್ರೇಣಿಯಾಗಿದೆ. ಈ ಕಾರಣಕ್ಕೆ ಈ ಗಿರಿಶ್ರೇಣಿಯ ಸೌಂದರ್ಯ ಸವಿಯಲು ವಾರಾಂತ್ಯ ಸೇರಿದಂತೆ ಇತರ  ದಿನಗಳಲ್ಲಿ ಜಿಲ್ಲೆ, ಅಂತರ್ ಜಿಲ್ಲೆ, ರಾಜ್ಯ, ಅಂತರ್ ರಾಜ್ಯ ಸೇರಿದಂತೆ ಅನೇಕ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಳೆಗಾಲದಲ್ಲಿ ಇಲ್ಲಿನ ಪರಿಸರ ಮಂಜಿನಿಂದ ಆವೃತವಾಗಿ ಇಡೀ ಪರಿಸರದ ಮೇಲೆ ಹಾಲು ಚಲ್ಲಿದಂತೆ ಭಾಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‍ಗಿರಿ ಪ್ರವಾಸಿ ತಾಣಗಳನ್ನು ತಲುಪಲು ಉತ್ತಮ ರಸ್ತೆ ಸಂಪರ್ಕ ಇದೆಯಾದರೂ ಈ ರಸ್ತೆ ಬದಿಗಳಲ್ಲಿರುವ ಚರಂಡಿಗಳನ್ನು ಸ್ವಚ್ಛ ಮಾಡದ ಪರಿಣಾಮ ಮಳೆಗಾಲದಲ್ಲಿ ಈ ಭಾಗದಲ್ಲಿ ಸುರಿಯುವ ಭಾರೀ ಮಳೆಯ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಚರಂಡಿಯಲ್ಲಿ ಹೂಳು, ತ್ಯಾಜ್ಯ ತುಂಬಿಕೊಂಡಿರುವ ಪರಿಣಾಮ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆ ಮೇಲೆಯೇ ಹರಿಯುತ್ತದೆ. ಪರಿಣಾಮ ಮಳೆ ನೀರು ರಸ್ತೆ ಮೇಲೆಯೇ ಹರಿದು ವಿಪರೀತ ತೇವದಿಂದ ಗಿರಿಶ್ರೇಣಿಯಲ್ಲಿನ ರಸ್ತೆ ಹಾಗೂ ರಸ್ತೆ ಬದಿಯ ಗುಡ್ಡಗಳಲ್ಲಿ ಭೂ ಕುಸಿತ ಸಂಭವಿಸುವುದು ಸಾಮಾನ್ಯವಾಗಿದೆ.

ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ, ಮಾಣಿಕ್ಯಧಾರಕ್ಕೆ ಸಾಗುವ ಮಾರ್ಗದ ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಮೋರಿ ಮೂಲಕ ಹಾದು ಹೋಗಲು ಅನುವು ಮಾಡಿಕೊಟ್ಟಲ್ಲಿ ರಸ್ತೆಯನ್ನು ಉಳಿಸಿಕೊಳ್ಳಬಹುದು ಹಾಗೂ ಮಳೆಗಾಲದಲ್ಲಿ ಸಂಭವಿಸಬಹುದಾದ ಗುಡ್ಡಕುಸಿತವನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎನ್ನುವುದು ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರ ಆಗ್ರಹವಾಗಿದೆ. ಈ ಮಾರ್ಗವು ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ, ಮಾಣಿಕ್ಯಧಾರ ಹಾಗೂ ಕೆಮ್ಮಣ್ಣುಗುಂಡಿ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದು, ಗಿರಿಶ್ರೇಣಿಯಲ್ಲಿ ಮಳೆಗಾಲದಲ್ಲಿ  ನಿರಂತರ ಮಳೆಯಿಂದ ರಸ್ತೆ ಬದಿಗಳಲ್ಲಿ ಭಾರೀ ಪ್ರಮಾಣದ ಮಳೆನೀರು ಹರಿಯುವುದರಿಂದ ಗುಡ್ಡ ಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ಮಳೆ ಸೇರಿದಂತೆ ಅತಿವೃಷ್ಟಿಯೂ ಆಗಿದ್ದು, ಈ ವೇಳೆ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗದೇ ಮಳೆನೀರು ರಸ್ತೆ ಮೇಲೆ ಹರಿದ ಪರಿಣಾಮ ಅನೇಕ ಬಾರಿ ಸಂಪರ್ಕ ಕಡಿತಗೊಂಡಿತ್ತು.

ಬಾಬಾಬುಡನ್ ಗಿರಿ ದರ್ಗಾಕ್ಕೆ ತೆರಳುವ ಮಾರ್ಗದ ಪಂಡರವಳ್ಳಿ ತಿರುವಿನಲ್ಲಿ ರಸ್ತೆ ವ್ಯವ್ಯಸ್ಥೆ ಚೆನ್ನಾಗಿದ್ದರೂ ಚರಂಡಿಯಲ್ಲಿರುವ ಕಸಕಡ್ಡಿ ಮಣ್ಣು ತೆಗೆಯುವಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿರುವ ಪರಿಣಾಮ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದೇ ಭಾಗದಲ್ಲಿರುವ ಸರ್ಪದಹಾದಿಯಿಂದ ಕವಿಕಲ್‍ಗುಂಡಿ ಮಧ್ಯೆ ಕಳೆದ ವರ್ಷ ರಸ್ತೆ ಕುಸಿತ ಸಂಭವಿಸಿದ್ದು, ಕವಿಕಲ್‍ಗುಂಡಿಯಿಂದ ಅತ್ತಿಗುಂಡಿವರೆಗೂ 2ರಿಂದ 3 ಕಡೆಗಳಲ್ಲಿ ರಸ್ತೆ ಕುಸಿತ ಉಂಟಾಗಿತ್ತು. ಅತ್ತಿಗುಂಡಿಯಿಂದ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದವರೆಗೂ ಅನೇಕ ಕಡೆಗಳಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಇದಕ್ಕೆ ಮುಖ್ಯ ಕಾರಣ ರಸ್ತೆ ಬದಿಯಲ್ಲಿರುವ ಚರಂಡಿಗಳ ಅಸಮರ್ಪಕ ನಿರ್ವಹಣೆ ಎಂಬುದು ಸ್ಥಳೀಯರ ದೂರಾಗಿದೆ.

ಮಳೆಗಾಲ ಸಂದರ್ಭದಲ್ಲಿ ಗಿರಿ ಪ್ರದೇಶದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತದೆ. ಈ ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವಂತೆ ಮಾಡಿದಲ್ಲಿ ಧರೆಕುಸಿತ ಸಂಭವಿಸುವುದನ್ನು ತಪ್ಪಿಸಬಹುದಾಗಿದೆ. ರಸ್ತೆಯನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರಸಕ್ತ ಜಿಲ್ಲಾದ್ಯಂತ ಮಳೆಗಾಲ ಆರಂಭದ ಮುನ್ಸೂಚನೆ ಸಿಕ್ಕಿದ್ದು, ಭಾರೀ ಮಳೆಗೂ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಮಾರ್ಗದಲ್ಲಿನ ರಸ್ತೆ ಬದಿಯ ಚರಂಡಿಗಳ ಸ್ವಚ್ಛತೆ, ದುರಸ್ತಿಪಡಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News