ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ನಾವು ಕೆಟ್ಟೆವು: ಸಿದ್ದರಾಮಯ್ಯ
ಮೈಸೂರು,ಜೂ.11: ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಜೆಡಿಎಸ್ ನವರ ಜೊತೆ ಹೋಗಿಯೇ ನಾವು ಕೆಟ್ಟಿದ್ದು ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸತ್ ಎಲೆಕ್ಷನ್ ನಲ್ಲಿ ಜೆಡಿಎಸ್ ಜೊತೆ ಹೋಗಿದ್ದಕ್ಕೆ ಕೆಟ್ಟಿದ್ದು ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲೋದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಹೆಚ್‍ಡಿಕೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಬಿಜೆಪಿ ಗೆಲ್ಲಲು ಅವರು ಕಾರಣ ಅಲ್ವಾ.? ಮೊದಲು ನಾವು ಅಭ್ಯರ್ಥಿ ಹಾಕಿದ್ದು, ಆ ನಂತರ ಅವರು ಅಭ್ಯರ್ಥಿ ಹಾಕಿದ್ದು. ಬಿಜೆಪಿ ಗೆಲ್ಲಬಾರದಿತ್ತು ಅನ್ನೋದಿದ್ರೆ ಅವರು ಕ್ಯಾಂಡಿಡೆಟ್ ಹಾಕಬಾರದಿತ್ತು. ದೇವೇಗೌಡರು ನಿಂತಾಗ ನಾವು ಕ್ಯಾಂಡಿಡೇಟ್ ಹಾಕಿದ್ವಾ.? ಇಲ್ಲ ತಾನೇ, ಅದೇ ರೀತಿ ಅವರು ಮಾಡಬೇಕಿತ್ತು. ಅವರು ಮುಖ್ಯಮಂತ್ರಿ ಆಗೋಕೆ ನಾವು ಸಪೋರ್ಟ್ ಮಾಡಿರಲಿಲ್ವ. ನಾವು ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೆವು ಬಿಜೆಪಿ ಗೆಲ್ಲಬಾರದು ಅನ್ನೋದಾಗಿದ್ದರೆ ನಮಗೆ ಸಪೋರ್ಟ್ ಮಾಡಬೇಕಿತ್ತು. ಬಿಜೆಪಿ ಗೆಲ್ಲಲು ಅವರೇ ನೇರ ಕಾರಣ ಎಂದು ಸಿದ್ಧರಾಮಯ್ಯ ಗುಡುಗಿದರು.