ಪಠ್ಯಪರಿಷ್ಕರಣೆ ವಿವಾದ; ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆಗೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹ

Update: 2022-06-11 15:14 GMT

ತುಮಕೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ  ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿ ಕೋಮುವಾಧಿಕರಣ ವಿರೋಧಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್ ರವರು ಪ್ರಸಕ್ತ ಸಾಲಿನ ಶಾಲಾ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳನ್ನು ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರವರ್ತಿ ತಮಗೆ ವಹಿಸಿದ ಜವಾಬ್ದಾರಿಯನ್ನು ಮೀರಿ ಮಹನೀಯರ ಮತ್ತು ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಪೂಲೆ, ನಾರಾಯಣಗುರು, ವಾಲ್ಮೀಕಿ, ಕೆಂಪೇಗೌಡ ಮುಂತಾದ ದಾರ್ಶನೀಕರ ವಿಚಾರಧಾರೆಗಳನ್ನು ವಿಕೃತಗೊಳಿಸಿ ಶೈಕ್ಷಣೀಕ ಕ್ಷೇತ್ರದಲ್ಲಿ ಸಂವಿಧಾನ ಬಾಹೀರವಾಗಿ ಕೇಸರೀಕರಣವನ್ನು ಸೇರಿಸುವ ಹುನ್ನಾರದಿಂದ ಪರಿಷ್ಕೃತ ಪಠ್ಯಕ್ರಮವನ್ನು ಪರಿಷ್ಕರಣಕ್ಕೆ ಮುಂದಾದ ದುಷ್ಕೃತ್ಯವನ್ನು ಖಂಡಿಸಿ ಈ ಹೊಣೆಯನ್ನು ಹೊತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಬೇಕೆಂದು ಸರಕಾರವನ್ನು ಕೆ.ದೊರೈರಾಜ್ ರವರು ಆಗ್ರಹಿಸಿದರು. 

ಪಂಡಿತ್ ಜವಾಹರ್ ಮಾತನಾಡಿ ಡಾ.ಬಿ,ಆರ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲವನ್ನು ಒಳಗೊಳ್ಳುವ ತತ್ವವನ್ನು ರೋಹಿತ್ ಚಕ್ರತೀರ್ತ ಸಮಿತಿ ಬದಿಗಿಟ್ಟಂತೆ ಕಾಣುತ್ತಿದ್ದು ಇದೇ ಸರಕಾರ 20 ವರ್ಷಗಳು ಮುಂದುವರಿದರೇ ಗಾಂಧೀಜಿ ಚರಿತ್ರೆಯನ್ನೇ ಹೊಸಕಿಹಾಕುವ ಹುನ್ನಾರವನ್ನು ಹೊಂದಿದೆ ಎಂದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಶಿಕ್ಷಣ ಸಚಿವರು ಸಬ್ಯತೆಯನ್ನು ಮೀರಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಅವೈಜ್ಞಾನಿಕವಾಗಿ ನಾಡಿನ ಎಲ್ಲಾ ಮಹನೀಯರ ಮೌಲ್ಯಗಳನ್ನು ತಿರುಚುವ ಮತ್ತು ಪಠ್ಯಕ್ರಮಗಳನ್ನು ಕೈಬಿಡುವ ಮತ್ತು ಕೋಮುವಾದಿಕರಣಕ್ಕೆ ಮುಂದಾಗಿರುವ ಕ್ರಮಗಳನ್ನು ಖಂಡಿಸಿ ಕೂಡಲೇ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು  ಒತ್ತಾಯಿಸಿದರು.

 ದಲಿತ ಸಂಘರ್ಷ ಸಮಿತಿಯ ರಾಮಯ್ಯ ಮಾತನಾಡಿ ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸಬೇಕು ಪರಿಷ್ಕರಣಾ ಪಟ್ಟಿಯ ಹೆಸರಿನಲ್ಲಿ ಬೊಕ್ಕಸದ ಮೇಲಾಗಿರುವ ವೆಚ್ಚವನ್ನು ಶಿಕ್ಷಣ ಸಚಿವರು ಮತ್ತು ರೋಹಿತ್ ಚಕ್ರತೀರ್ತರಿಂದಲೇ ಬರಿಸಬೇಕು ಎಂದು ಆಗ್ರಹಿಸಿದರು. 

ಪಠ್ಯಪರಿಷ್ಕರಣೆಯಿಂದ ವಿದ್ಯಾರ್ಥಿಗಳ ಅರಿವಿನ ಮತ್ತು ಬೆಳವಣಿಗೆಯನ್ನು ಸಂಪೂರ್ಣವಾಗಿಸರಕಾರ ನಿರ್ಲಕ್ಷಿಸಿದೆ ಬೇಗನೆ ಹಳೇ ಪಠ್ಯಪುಸ್ತಕ ಕ್ರಮಗಳನ್ನೇ ಎಲ್ಲಾ ಶಾಲಾ ಮಕ್ಕಳಿಗೆ ಸಿಗುವಂತಾಗಬೇಕು ಎಂದು ರಂಗದಾಮಯ್ಯ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ರೈತಸಂಘಟನೆಯ ಬಿ.ಉಮೇಶ್. ಕೊಳಗೇರಿ ಸಮಿತಿಯ ಅರುಣ್. ವಿದ್ಯಾರ್ಥಿ ಸಂಘಟನೆಯ ಶಿವಣ್ಣ ಮಾತನಾಡಿದರು. 

ಪ್ರತಿಭಟನೆ ನೇತೃತ್ವನ್ನು ಸುಬ್ರಮಣ್ಯ, ತಿರುಮಲಯ್ಯ, ವೆಂಕಟೇಶ್, ನಾಗರಾಜು ಹನುಮಂತರಾಯಿ,ರವೀಶ್.ಲೋಕೇಶ್ ರಫೀಕ್.ಗುಲ್ಜಾರ್ ಮುಂತಾದವರು ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News