ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಕಳುಹಿಸುವ ಎಲ್ಲ ಚಡ್ಡಿಗಳನ್ನು ಪ್ರಧಾನಿ ಮೋದಿಗೆ ಕಳುಹಿಸುತ್ತೇವೆ: ಪ್ರಿಯಾಂಕ್ ಖರ್ಗೆ
ಮೈಸೂರು,ಜೂ.11: ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಕಳಿಸುತ್ತಿರುವ ಎಲ್ಲಾ ಚಡ್ಡಿಗಳನ್ನು ಪ್ರಧಾನಿ ನರೇಂದ್ರ ಮೋದಿವರಿಗೆ ವಾಪಸ್ ಕಳಿಸುತ್ತೇವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡರುಗಳಿಗೆ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಕೇಳಿದ್ದು ಆರೆಸ್ಸೆಸ್ ಖಾಕಿ ಚಡ್ಡಿಯನ್ನು. ನೀವು ಕೊಡುತ್ತಿರುವುದು ಸಾರ್ವಜನಿಕರ ಬಣ್ಣದ ಚಡ್ಡಿಗಳನ್ನು ಅವು ನಮಗೇಕೆ? ವಾಸ್ತವದಲ್ಲಿ ಎನ್‍ಎಸ್‍ಯುಐ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆ ಮುಂದೆ ಮನುವಾದಿ ಮನಸ್ಥಿತಿ ಬಿಂಬಿಸುವ ಆರೆಸ್ಸೆಸ್ ಚಡ್ಡಿಯನ್ನು ಸುಟ್ಟಿದ್ದು ನಿಜ. ಅವರ ಚಡ್ಡಿಗೆ ಬೆಂಕಿ ಬಿದ್ದರೆ ಬಿಜೆಪಿಯವರಿಗೇಕೆ ಉರಿ? ಚಡ್ಡಿ ಸುಟ್ಟಿದ್ದಕ್ಕೆ ಬಿಜೆಪಿಯ ದಲಿತ ಮುಖಂಡರಿಗೆ ಕೋಪ ಬಂದಿದೆ. ಎಸ್‍ಸಿಪಿ, ಟಿಎಸ್‍ಪಿ ಹಣ ಕಡಿತ ಮಾಡಿದಾಗ ನಿಮಗೆ ಕೋಪ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಅನುಮೋದನೆ ಪಡೆಯದೇ ಯಾವುದೇ ನಿರ್ಧಿಷ್ಟ ವಿದ್ಯಾರ್ಹತೆ ಇಲ್ಲದ ವ್ಯಕ್ತಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿ ರಾಜ್ಯದಲ್ಲಿ ಒಂದು ಕೋಟಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಬಿಜೆಪಿ ಸರ್ಕಾರ ಯತ್ನಿಸಿದೆ. ಆರ್‍ಎಸ್‍ಎಸ್‍ನವರು ಸ್ವಯಂ ಘೋಷಿತ ತತ್ವಜ್ಞಾನಿಗಳು. ಯಾವ ಮಾನದಂಡ ಅನುಸರಿಸಿ ಸಮಿತಿ ರಚನೆ ಮಾಡಿದಿರಿ? ಅದರಲ್ಲೂ ಸರ್ಕಾರದ ಅನುಮೋದನೆ ಪಡೆಯದೇ ಕೇವಲ ಮೌಖಿಕ ಆಧಾರದ ಮೇಲೆ ಸಮಿತಿ ರಚಿಸಿ ಪಠ್ಯ ಪರಿಷ್ಕರಣೆ ಮಾಡಿದ್ದ ಹುನ್ನಾರವೇನು? ಆರೆಸ್ಸೆಸ್ ಅಜೆಂಡಾ ಪ್ರಚಾರ ಮಾಡಬೇಕು ಎನ್ನುವುದಾದರೆ, ಪ್ರತ್ಯೇಕತೆಯನ್ನೆ ತನ್ನಿ ಬೇಡ ಅನ್ನಲ್ಲ ಆದರೆ ಅದರಲ್ಲಿ ಸತ್ಯವಿರಲಿ ಎಂದರು.
57 ವರ್ಷದಿಂದ ಆರೆಸ್ಸೆಸ್ ಕಚೇರಿಗಳಲ್ಲಿ ರಾಷ್ಟ್ರದ್ವಜ ಏಕೆ ಹಾರಿಸಿಲ್ಲ? ಹೆಡಗೆವಾರ್ ಭಾಷಣ ಯಥಾವತ್ತಾಗಿ ಹಾಕಿ. ರಾಷ್ಟ್ರದ್ವಜದ ಬಗ್ಗೆ ಅವರ ಅನಿಸಿಕೆ ಏನಿತ್ತು ತಿಳಿಸಿ? ಮಹಾತ್ಮಾಗಾಂಧಿಯವರನ್ನು ಏಕೆ ಕೊಂದಿರಿ? ಕ್ವಿಟ್ ಇಂಡಿಯಾ ಮೂವ್ಮೆಂಟ್‍ನಲ್ಲಿ ನೀವು ಎಲ್ಲಿದ್ದಿರಿ? ರಾಮಲೀಲಾ ಮೈದಾನದಲ್ಲಿ ಸಂವಿಧಾನವನ್ನು ಸುಟ್ಟು ಮನುಸ್ಮೃತಿಯೇ ನಮ್ಮ ಸಂವಿಧಾನ ಎನ್ನಲು ಕಾರಣವೇನು? ಸಾವರ್ಕರ್‍ಗೆ ವೀರ ಎಂದು ಬಿರುದು ಕೊಟ್ಟವರು ಯಾರು? ಇವೆಲ್ಲವನ್ನೂ ಸತ್ಯವಾಗಿ ಪುಸ್ತಕ ರೂಪದಲ್ಲಿ ತನ್ನಿ ನಾವು ಬೇಡ ಅನ್ನಲ್ಲ ಅದನ್ನು ಬಿಟ್ಟು, ಯಾವುದೇ ವೈಚಾರಿಕತೆ, ವೈಜ್ಞಾನಿಕ ದೃಷ್ಟಿಕೋನ ಇಲ್ಲದೆ ಪುಸ್ತಕ ಪರಿಷ್ಕರಣೆ ಮಾಡಿದ್ದು ತಪ್ಪು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಸರ್ಕಾರಿ ಶಾಲೆಯಒಂದು ಕೋಟಿ ಮಕ್ಕಳ ಭವಿಷ್ಯ ಮುಖ್ಯಮಂತ್ರಿಗಳ ಕೈಯಲ್ಲಿದೆ ಅವರು ಮಕ್ಕಳನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ನರೇಂದ್ರ, ಶಿವಣ್ಣ, ಅಕ್ಬರ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.