×
Ad

ಬಿಜೆಪಿ ಸರ್ಕಾರದ ಕಾನೂನು, ಏಕಮುಖ ತೀರ್ಮಾನದಿಂದ ಯುವಕರ ಭವಿಷ್ಯ ನಾಶ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-06-11 22:55 IST

ಮೈಸೂರು,ಜೂ.11: 'ಬಿಜೆಪಿ ಸರ್ಕಾರದ ನಿರ್ಧಾರ ಕಾನೂನು, ಏಕಮುಖ ತೀರ್ಮಾನ ದೇಶದ ಯುವಕರ ಭವಿಷ್ಯ ನಾಶ ಮಾಡಿವೆ. ಅವರ ವಿರುದ್ಧ ಮತ ನೀಡುವ ಮೂಲಕ ಸಂದೇಶ ಕಳುಹಿಸುವ ಅವಶ್ಯಕತೆ ಇದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಕಾಂಗ್ರಸ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್  13ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇದೆ. ಮತದಾರರನ್ನ ಭೇಟಿ ಮಾಡಿ ಇಂದಿನ ಬಿಜೆಪಿ ಸರ್ಕಾರ ಆಡಳಿತದ ವೈಖರಿ ಬಗ್ಗೆ ತಿಳಿಸಲಾಗಿದೆ. ಈ ಚುನಾವಣಾ ಫಲಿತಾಂಶ ರಾಜ್ಯ ಹಾಗೂ ದೇಶಕ್ಕೆ ಸ್ಪಷ್ಟ ಸಂದೇಶ ಕಳುಹಿಸುವ ಚುನಾವಣೆ. ಈ ನಾಡಿನ ಹಿತ ಕಾಯುವ ಗುರುತರ ಜವಾಬ್ದಾರಿ ಪದವೀಧರ ಮತದಾರರ ಮೇಲೆ ಇದೆ. ರಾಜಕೀಯ ಪಕ್ಷದ ಪ್ರಭಾವ ಜನರು ಹಾಗೂ ಸಮಾಜದ ಮೇಲಿನ ಪರಿಣಾಮ, ದುಷ್ಪರಿಣಾಮ ಗ್ರಹಿಸಿ ಸ್ಪಷ್ಟ ಸಂದೇಶ ರವಾನೆ ಮಾಡುವ ಚುನಾವಣೆ ಎಂದರು.

ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ಶೇ 12.13 ರಷ್ಟು ಮಾತ್ರ ಶಿಕ್ಷಣ ಇತ್ತು. ವಿಶೇಷ ಶಿಕ್ಷಣ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿತ್ತು. ರಾಜೀವ್ ಗಾಂಧಿ ಕೊಟಾರಿಯಾ ಕಮಿಷನ್ ವರದಿಯಂತೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿಕೊಡಲಾಯ್ತು. ಇಂದು 20:20 ಪಾಲಿಸಿಯಲ್ಲಿ ಯಾವ ಚರ್ಚೆ ಆಗದೆ ಏಕಮುಖ ಶಿಕ್ಷಣ ನೀತಿ ತಂದಿದ್ದಾರೆ. ಕೃಷಿಕರು, ಕಾರ್ಮಿಕರು, ಬಡವರಿಗೆ ಈ ನೀತಿ ಮಾರಕವಾಗಿದೆ. ಈ ಶಿಕ್ಷಣ ನೀತಿ ಅವೈಜ್ಞಾನಿಕ. ಇದರಿಂದ ಯುವಕರು, ಭಾರತದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಎಚ್.ಸಿ.ಮಹದೇವಪ್ಪ ಗುಡುಗಿದರು.

ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಚರಿತ್ರೆ ತಿರುವು ಹಾಕಲಾಗುತ್ತಿದೆ. ಅಂಬೇಡ್ಕರ್, ಬಸವಣ್ಣ, ಸಂತರು, ಸಾಹಿತಿಗಳ ಇತಿಹಾಸ ತಿರುಚಲಾಗುತ್ತಿದೆ. ಮನುವಾದದ ಧರ್ಮ, ಜಾತಿ ಸೃಷ್ಟಿ ಮಾಡುವ ಕೆಲಸ ಮಾಡಿ ಶಿಕ್ಷಣವನ್ನು ಗೊಂದಲದ ಗೂಡಾಗಿಸಿದ್ದಾರೆ. ಧರ್ಮ ಜಾತಿ ಆಧಾರಿತ ಶಿಕ್ಷಣ ನೀಡಲು ಮುಂದಾಗಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ಬಲವಂತವಾಗಿ ಹೇರುವ ಕೆಲಸ ಮಾಡಲಾಗುತ್ತಿದೆ. ಇವೆಲ್ಲವನ್ನ ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು. ಬಿಜೆಪಿ ಸರ್ಕಾರ ತನ್ನ ಅಂಗ ಸಂಸ್ಥೆಗಳ ಮೂಲ ಅವರನ್ನು ಕೆಲಸ ಮಾಡಲು ಬಿಟ್ಟು ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಹರಿಹಾಯ್ದರು. 

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಾಗ್ದಾಳಿ ನಡೆಸಿದ ಎಚ್.ಸಿ.ಮಹದೇವಪ್ಪ, ಪ್ರತಾಪ್ ಸಿಂಹ ಒಬ್ಬ ಅಂಕಣಕಾರ ಅಷ್ಟೆ. ಸಿದ್ದರಾಮಯ್ಯ ಬೆಸ್ಟ್ ಚೀಫ್ ಮಿನಿಸ್ಟರ್ ಆಫ್ ದಿ ಕಂಟ್ರಿ. ಅವರಿಗೆ ಆರ್ಥಿಕತೆ ಏನು ಗೊತ್ತು ಅಂತ ಪ್ರತಾಪ್ ಸಿಂಹ ಪ್ರಶ್ನಿಸುತ್ತಾರೆ. ಮೈಸೂರು ಬೆಂಗಳೂರು ರಸ್ತೆಯನ್ನ ಯುಪಿಎ ಸರ್ಕಾರ ಅವಧಿಯಲ್ಲಿ ಸ್ಟೇಟ್ ಹೈವೆಯನ್ನ ನ್ಯಾಷನಲ್ ಹೈವೆ ಆಗಿ ಅಪ್ ಗ್ರೇಡ್ ಮಾಡಲು ತೀರ್ಮಾನ ಮಾಡಲಾಗಿತ್ತು. 2500 ಕಿಮೀ ರಸ್ತೆ ಅಭಿವೃದ್ಧಿ ಮಾಡಲು ಯುಪಿಎ ಸರ್ಕಾರ ನಿರ್ಧಾರ ಮಾಡಲಾಗಿತ್ತು. ಆಗ ನಾನು ಲೋಕೋಪಯೋಗಿ ಸಚಿವ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈ ತೀರ್ಮಾನ ಮಾಡಿದ ಮೇಲೆ ಮುಂದಿನ ಸರ್ಕಾರ ಮಾಡಲೇಬೇಕಾಯಿತು. ಆಗ ಅವರು ಎಂಪಿನೇ ಆಗಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News