ಜೂ.13ರಂದು ದೇಶದಾದ್ಯಂತ ಈ.ಡಿ. ಕಚೇರಿಗಳ ಎದುರು ಕಾಂಗ್ರೆಸ್ ಪ್ರತಿಭಟನೆ

Update: 2022-06-11 17:53 GMT

ಬೆಂಗಳೂರು, ಜೂ.11: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರಕಾರ ಅನಗತ್ಯ ಕಿರುಕುಳ ನೀಡುತ್ತಿದ್ದು, ಜೂ.13ರಂದು ದೇಶದ ಎಲ್ಲ ಭಾಗಗಳಲ್ಲಿರುವ ಈ.ಡಿ. ಕಚೇರಿ ಮುಂದೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅದರ ಅಂಗವಾಗಿ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್ ಬಳಿಯಿರುವ ಈ.ಡಿ. ಕಚೇರಿ ಮುಂದೆ ಅಂದು ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಂಸತ್ ಸದಸ್ಯರು ಹಾಗೂ ಎಐಸಿಸಿ ಪದಾಧಿಕಾರಿಗಳು ದಿಲ್ಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದಿಲ್ಲಿಯ ಕಾಂಗ್ರೆಸ್ ಕಚೇರಿಯಿಂದ ಈ.ಡಿ.ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ರಾಹುಲ್ ಗಾಂಧಿಯವರನ್ನು ಎಷ್ಟು ಹೊತ್ತು ವಿಚಾರಣೆ ನಡೆಸಲಾಗುವುದೋ ಅಷ್ಟೊತ್ತು ಪ್ರತಿಭಟನೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಪ್ರತಿಭಟನೆ ವಿಚಾರವಾಗಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯದ ಇತರೆ ಭಾಗಗಳಿಂದ ಪ್ರತಿಭಟನೆಗೆ ಆಗಮಿಸುವವರು ಹಿಂದಿನ ದಿನವೇ ಬೆಂಗಳೂರಿಗೆ ಬರಬೇಕೆಂದು ಈ ಮೂಲಕ ಕರೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಾವು ಈ.ಡಿ. ಕಚೇರಿ ಒಳಗೆ ಪ್ರವೇಶ ಮಾಡುವುದಿಲ್ಲ. ರಾಷ್ಟ್ರದ ಜನತೆಯ ನೋವನ್ನು ವ್ಯಕ್ತಪಡಿಸಲು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ರಾಜಕೀಯ ತ್ಯಾಗ ಹಾಗೂ ಬೆಳವಣಿಗೆಯನ್ನು ಸಹಿಸದ ಬಿಜೆಪಿ ಸರಕಾರ ಅವರ ವಿರುದ್ಧ ವಿನಾಕಾರಣ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಟ್ಟು ಕಿರುಕುಳ ನೀಡುತ್ತಿದೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬಿಜೆಪಿ ಸರಕಾರವೇ ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಬಿಟ್ಟಿದ್ದರೂ ಗಾಂಧಿ ಕುಟುಂಬಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಮತ್ತೆ ಆ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಿ ತನಿಖೆ ಆರಂಭಿಸಲಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಜವಾಹರಲಾಲ್ ನೆಹರು ಅವರ ಕಾಲದಿಂದ ಆರಂಭವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ಪತ್ರಿಕೆಯಾಗಿದೆ. ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು ಇದನ್ನು ನಡೆಸಲು ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅಂದಿನಿಂದ ಆ ಪತ್ರಿಕೆಯ ಆಸ್ತಿಪಾಸ್ತಿಗಳನ್ನು ಉಳಿಸಿಕೊಂಡು ಬರಲಾಗಿದೆ ಎಂದು ಅವರು ತಿಳಿಸಿದರು. 

ಈ ಹಿಂದೆ ಆಸ್ಕರ್ ಫನಾರ್ಂಡಿಸ್ ಅದಕ್ಕೆ ಟ್ರಸ್ಟಿಯಾಗಿದ್ದು, ಈಗ ಆ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲಾಗಿದೆ. ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆರ್ಥಿಕ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ಆರಂಭಿಸಿದೆ. ನಮ್ಮ ನಾಯಕರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಅವರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಗಾಂಧಿ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಸೋನಿಯಾ ಗಾಂಧಿಯವರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ರಾಹುಲ್ ಗಾಂಧಿ ಜೂ.13ರಂದು ಈ.ಡಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಹೀಗಾಗಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಎಲ್ಲ್ಲ ಈ.ಡಿ. ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯಸಭೆ ಚುನಾವಣೆ: ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 69 ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಓರ್ವ ಪಕ್ಷೇತರ ಶಾಸಕ ಹಾಗೂ ಜೆಡಿಎಸ್ ಶಾಸಕರೊಬ್ಬರು ಸೇರಿದಂತೆ ನಮ್ಮ ಪಕ್ಷಕ್ಕೆ 71 ಮತಗಳು ಬಂದಿದೆ. ನಮಗೆ ಆಧಾರಸ್ತಂಭವಾಗಿರುವ ಎಲ್ಲ ಶಾಸಕರಿಗೆ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರಿಗೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಬೆಂಬಲಿಸಿ ನಮ್ಮ ಅಭ್ಯರ್ಥಿ ಪರ ಮತ ಹಾಕಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಮೊದಲ ಪ್ರಾಶಸ್ತ್ಯದ ಅಷ್ಟೂ ಮತಗಳು ನಮಗೆ ಬಂದಿವೆ. ಎಲ್ಲ ಪಕ್ಷಗಳಿಗೂ ಅವರದೇ ಆದ ಒತ್ತಡವಿತ್ತು. 69 ಮತಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಲ್ಲ. ಬೇರೆ ಪಕ್ಷಕ್ಕೆ ಹೆಚ್ಚುವರಿ ಮತಗಳು ಬಂದಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News