'ಅಡ್ಡ' ಮತದಾನ ಮಾಡಿದ ಶಾಸಕರಿಗೆ ನೋಟಿಸ್: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ

Update: 2022-06-11 18:01 GMT

ಬೆಂಗಳೂರು, ಜೂ. 11: ‘ರಾಜ್ಯಸಭೆ ಚುನಾವಣೆಯಲ್ಲಿ ‘ಅಡ್ಡ' ಮತದಾನ ಮಾಡಿದ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್(ವಾಸು) ಅವರಿಗೆ ನೋಟಿಸ್ ನೀಡಲಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹೀಂ, ‘ಒಬ್ಬ ಶಾಸಕ ಕಾಂಗ್ರೆಸ್‍ಗೆ ಮೊದಲ ಪ್ರಾಶಸ್ತ್ಯದ ಮತ ನೀಡಿದ್ದು, ಬಿಜೆಪಿಗೆ ಎರಡನೇ ಪ್ರಾಶಸ್ತ್ಯದ ಮತ ನೀಡಿದ್ದಾರೆ. ಮತ್ತೊಬ್ಬರು ಬಿಜೆಪಿ ಮೊದಲ ಪ್ರಾಶಸ್ತ್ಯ ಮತ್ತು ಕಾಂಗ್ರೆಸ್‍ಗೆ ಎರಡನೇ ಪ್ರಾಶಸ್ತ್ಯದ ಮತವನ್ನು ಹಾಕಿದ್ದಾರೆ' ಎಂದು ಮಾಹಿತಿ ನೀಡಿದರು.

‘ಇಬ್ಬರೂ ಶಾಸಕರ ಬ್ಯಾಲೆಟ್ ಪೇಪರ್ ಕುರಿತಾಗಿ ಪಕ್ಷದಿಂದ ನಿಯೋಜನೆ ಮಾಡಿದ್ದ ವೀಕ್ಷಕರು ವರದಿ ನೀಡಿದ್ದು, ಇದು ದುರ್ದೈವ. ಪಕ್ಷದ ವಿಪ್ ಅನ್ನು ಶಾಸಕರು ಉಲ್ಲಂಘನೆ ಮಾಡಿದ್ದಾರೆ. ಕೋಮುವಾದಿಗಳನ್ನು ಸೋಲಿಸಬೇಕು ಎಂದು ರಾಷ್ಟ್ರಮಟ್ಟದಲ್ಲಿ ಮಾತನಾಡುವ ಕಾಂಗ್ರೆಸ್ ಪಕ್ಷ ಇವತ್ತು ಬಿಜೆಪಿ ಗೆಲ್ಲಿಸಲು ಕೆಲಸ ಮಾಡಿದ್ದು ರಾಜ್ಯದ ಜನತೆಗೆ ಬಹಿರಂಗವಾಗಿದೆ' ಎಂದು ಇಬ್ರಾಹೀಂ ಟೀಕಿಸಿದರು.

ಪ್ರತಿಭಟನೆ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಖಂಡಿಸಿ ನಾಳೆ(ಜೂ.12) ಬೆಳಗ್ಗೆ 11:30ಕ್ಕೆ ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷದಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಪಿತ ಗಾಂಧೀಜಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಅವರನ್ನು ಕೊಂದ ನಾಥೋರಾಮ್ ಗೋಡ್ಸೆ ಬೆಂಬಲಿಸುವ ಪಕ್ಷಕ್ಕೆ ಮತ ಹಾಕಿಸಿದ್ದು, ಇವರು ಜಾತ್ಯತೀತ ತತ್ವದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿದ್ದಾರೆಯೇ?' ಎಂದು ಇಬ್ರಾಹೀಂ ವಾಗ್ದಾಳಿ ನಡೆಸಿದರು.

‘ಮುಂಬರಲಿರುವ ಬಿಬಿಎಂಪಿ ಚುನಾವಣೆಗೆ ಸಿದ್ಧವಾಗಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಎಲ್ಲ ಕ್ಷೇತ್ರಗಳ ಪಕ್ಷದ ಅಧ್ಯಕ್ಷರ ಸಭೆ ನಡೆಸಿದ್ದೇವೆ. ಚುನಾವಣೆಗೆ ಅಧಿಸೂಚನೆ ಹೊರಬಿದ್ದ ಕೂಡಲೇ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು'

-ಸಿ.ಎಂ.ಇಬ್ರಾಹೀಂ ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News