ಜೆಡಿಎಸ್ ರಾಜ್ಯದಲ್ಲಿ ನಂಬರ್ 1 ಸ್ಥಾನಕ್ಕೆ ಬರಲಿದೆ: ಸಿ.ಎಂ.ಇಬ್ರಾಹೀಂ

Update: 2022-06-12 11:34 GMT

ಬೆಂಗಳೂರು, ಜೂ. 12: ‘ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಂಬರ್ ಒನ್ ಸ್ಥಾನಕ್ಕೆ ಬರಲಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಕ್ರಮವಾಗಿ ಎರಡೂ ಮತ್ತು ಮೂರನೇ ಸ್ಥಾನಕ್ಕೆ ತಳ್ಳಲ್ಪಡಲಿವೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಇಂದಿಲ್ಲಿ ಭವಿಷ್ಯ ನುಡಿದ್ದಾರೆ.

ರವಿವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ‘ಅಡ್ಡ' ಮತದಾನ ಮಾಡಿದ ಇಬ್ಬರು ಶಾಸಕರು-ಕಾಂಗ್ರೆಸ್ ಪಕ್ಷದ ವಿರುದ್ಧ ಪಕ್ಷದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೌಂಡೇಷನ್ ಹಾಕಿದ್ದಾರೆ ಎಂದು ನುಡಿದರು.

‘ರಾಜ್ಯಸಭೆ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಹಾಕಿಸಿದ್ದು 2ನೆ ಪ್ರಾಶಸ್ತ್ಯದ ಮತವನ್ನು ಶಾಸಕರು ಬಿಜೆಪಿಗೆ ಹಾಕಿಸಿದ್ದಾರೆ. ಬಿಜೆಪಿಗೆ ಮತ ಹಾಕಿಸಿದ ಆರೋಪದ ಮೇಲೆ ಆ ಇಬ್ಬರನ್ನು ವಜಾ ಮಾಡುವ ಧೈರ್ಯ ಕಾಂಗ್ರೆಸ್ ವರಿಷ್ಟರಿಗಿದೆಯೇ? ಎಂದು ಸಿ.ಎಂ.ಇಬ್ರಾಹೀಂ ಇದೇ ವೇಳೆ ಖಾರವಾಗಿ ಪ್ರಶ್ನಿಸಿದರು.

ಜಟ್ಕಾ ಕಟ್: ‘ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್‍ಗೆ ಜಟ್ಕಾ ಮಾಡಿ ಬಿಟ್ಟರು. ಹಲಾಲ್ ಮಾಡಿದ್ದರೂ ನಡೆಯುತ್ತಿತ್ತು. ನನಗೂ ಕಾಂಗ್ರೆಸ್‍ನವರು ಜಟ್ಕಾ ಮಾಡಲು ಹೊರಟಿದ್ದರು. ಆದರೆ, ತಪ್ಪಿಸಿಕೊಂಡು ಎಚ್.ಡಿ.ಕುಮಾರಸ್ವಾಮಿ ಅವರ ಪಕ್ಕದಲ್ಲಿ ಕುಳಿತಿದ್ದೇನೆ' ಎಂದು ಇಬ್ರಾಹೀಂ ಇದೇ ವೇಳೆ ಲೇವಡಿ ಮಾಡಿದರು.

‘ಮೈತ್ರಿ ಸರಕಾರದ ಅವಧಿಯಲ್ಲಿ 12 ಶಾಸಕರನ್ನು ಮುಂಬೈಗೆ ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದವರು ಯಾರು?. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಕಚೇರಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ' ಎಂದು ಇಬ್ರಾಹೀಂ ವಾಗ್ದಾಳಿ ನಡೆಸಿದರು.

ಸ್ಪೀಕರ್ ಗೆ ದೂರ: ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ‘ಪಕ್ಷದ ವಿಪ್ ಉಲ್ಲಂಘನೆ ಮಾಡಿ ಮತದಾನ ಮಾಡಿದ ಶಾಸಕರ ವಿರುದ್ಧ ಕಾನೂನು ಹೋರಾಟ ಮುಂದುವರೆಯಲಿದ್ದು, ಇಬ್ಬರೂ ಸದಸ್ಯರ ಶಾಸಕತ್ವ ಅನರ್ಹಗೊಳಿಸಲು ಕೋರಿ ವಿಧಾನಸಭೆ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು' ಎಂದು ತಿಳಿಸಿದರು.

‘ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದದಿಂದ ಪಕ್ಷದಲ್ಲಿ ಸ್ಥಾನಮಾನ ಪಡೆದು ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದೀರಲ್ಲ ನಾಚಿಕೆಯಾಗುವುದಿಲ್ಲವೇ? ನಿಮಗೆ ಜನರ ಬೆಂಬಲ ಇರುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬರಬೇಕು' ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News