''ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಸಿದ್ದರಾಮಯ್ಯ ಖಳ ನಾಯಕ'': ಬಿಜೆಪಿ

Update: 2022-06-12 12:45 GMT

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿರುವ ಬಿಜೆಪಿ, 'ಸಿದ್ದರಾಮಯ್ಯ ಈಗ ದಲಿತವಿರೋಧಿಯಾಗಿದ್ದಾರೆ' ಎಂದು ಟೀಕಿಸಿದೆ. 

ಮಾಜಿ ಸಚಿವೆ ಮೋಟಮ್ಮ ಅವರ ಆತ್ಮಕಥನವನ್ನು ಉಲ್ಲೆಖಿಸಿ ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ''ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ.  ದಲಿತ ನಾಯಕ ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದಿರಿ, ದಲಿತ ಶಾಸಕ ಅಖಂಡ ಮನೆ ಮೇಲೆ ದಾಳಿಯಾದಾಗ, ದಾಳಿ ಮಾಡಿದ ಮತಾಂಧರ ಪರವಾಗಿ ನಿಂತಿರಿ. ಈಗ ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಖಳ ನಾಯಕನಾಗಿದ್ದೀರಿ'' ಎಂದು ಕುಟುಕಿದೆ.

''ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರು ಹುಟ್ಟು ನೀಡಿದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಮೋಟಮ್ಮ ಅವರ ಶ್ರಮ ಮಹತ್ವದ್ದು. ಅಂತಹ ಮೋಟಮ್ಮ ಅವರನ್ನು ಕಾಂಗ್ರೆಸ್ ಹೀನಾಮಾನವಾಗಿ ನಡೆಸಿಕೊಂಡಿದೆ. ಇದು ದಲಿತ ಹಾಗೂ ಮಹಿಳಾ ಸಮುದಾಯಕ್ಕೆ ನೀವು ಮಾಡಿದ ಅವಮಾನ'' ಎಂದು ಕಿಡಿಗಾರಿದೆ.

'ದಲಿತ ವರ್ಗದಿಂದ ಬಂದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೆ, ಅವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಳ್ಳದೆ, ಅವರನ್ನು ಮೂಲೆಗುಂಪು ಮಾಡಿದಿರಿ. ದಲಿತರಿಗೆ ಅನ್ಯಾಯ ಮಾಡುವಾಗ ಅಹಿಂದ ಮಂತ್ರ ಎಲ್ಲಿತ್ತು?' ಎಂದು ಪ್ರಶ್ನಿಸಿದೆ. 

'ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿದ್ದ ಮೋಟಮ್ಮ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಮೋಟಮ್ಮ ಅವರನ್ನು ಸಚಿವರನ್ನಾಗಿ ಮಾಡುವ ಸಂದರ್ಭ ಬಂದಾಗ ವಿಧಾನಪರಿಷತ್ ಸದಸ್ಯರು ಎಂದು ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯ ಈಗ ದಲಿತವಿರೋಧಿಸಿದ್ದರಾಮಯ್ಯ ಆಗಿ ಬದಲಾಗಿದ್ದಾರೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News