ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇಂದು ಮತದಾನ

Update: 2022-06-12 19:41 GMT

ಬೆಂಗಳೂರು, ಜೂ. 12: ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ವಿಧಾನ ಪರಿಷತ್ತಿನ 2 ಪದವೀಧರರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಬೆಳಗ್ಗೆ 8 ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ವಾಯುವ್ಯ ಪದವೀಧರರ, ವಾಯುವ್ಯ ಶಿಕ್ಷಕರ, ದಕ್ಷಿಣ ಪದವೀಧರರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಅದೃಷ್ಟ ಪರೀಕ್ಷೆ ಇಳಿದಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ಸೇರಿದಂತೆ ಇನ್ನಿತರ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

ತೀವ್ರ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಮತಗಟ್ಟೆ ಸಾಮಾಗ್ರಿಗಳೊಂದಿಗೆ ಕರ್ತವ್ಯಕ್ಕೆ ತೆರಳಿದ್ದಾರೆ. ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಘಟಾನುಘಟಿ ಅಭ್ಯರ್ಥಿಗಳು, ‘ಶಿಕ್ಷಕಿತ' ಮತದಾರರನ್ನು ಸೆಳೆಯಲು ಕೊನೆಯ ಕ್ಷಣದ ಕಸರತ್ತು ನಡೆಸಿದ್ದಾರೆ.

ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕಾ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಂ.ವಿ ರವಿಶಂಕರ್, ಕಾಂಗ್ರೆಸ್‍ನ ಜಿ.ಎಂ.ಮಧು, ಜೆಡಿಎಸ್‍ನ ಎಚ್.ಕೆ.ರಾಮು, ಕನ್ನಡ ಚಳವಳಿ ಪಕ್ಷದಿಂದ ವಾಟಾಳ್ ನಾಗರಾಜ್ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇನ್ನೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಜೆಡಿಎಸ್‍ನಿಂದ ಶ್ರೀಶೈಲ ಘಡದಿಮ್ಮಿ ಹಾಗೂ ಕಾಂಗ್ರೆಸ್ ಬಸವರಾಜ ಗುರಿಕಾರ ಅಖಾಡದಲ್ಲಿದ್ದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್‍ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ್ ಹುಕ್ಕೇರಿ, ಜೆಡಿಎಸ್‍ನಿಂದ ಚಂದ್ರಶೇಖರ್ ಲೋಣಿ ಸ್ಪರ್ಧಿಸಿದ್ದು, ಗೆಲುವಿನ ವಿಜಯಮಾಲೆ ಯಾರಿಗೆ ದಕ್ಕಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜೂ.15ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ನಾಲ್ಕು ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಅಲ್ಲದೆ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 

ವಿಶೇಷ ಸಾಂದರ್ಭಿಕ ರಜೆ

ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ನಾಳೆ ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಶಿಕ್ಷಕರು ಮತ್ತು ಪದವೀಧರರು ಈ ಚುನಾವಣೆಯಲ್ಲಿ ಮತದಾನ  ಮಾಡಲಿದ್ದಾರೆ. ವಿಧಾನ ಪರಿಷತ್ ನ ಮತದಾನ ಕ್ಷೇತ್ರಗಳಲ್ಲಿನ ಸರಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಇನ್ನುಳಿದ ಕೈಗಾರಿಕ ಸಂಸ್ಥೆಗಲು ಹಾಗೂ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಖಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಪದವೀಧರು ಮತ್ತು ಶಿಕ್ಷಕರಿಗೆ ಮತದಾನ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಂದರ್ಭಿಕ ರಜೆಯನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News