×
Ad

ಪರಿಷ್ಕೃತ ಪಠ್ಯಪುಸ್ತಕಗಳ ಮೂಲ ಉದ್ದೇಶವೇ ಪ್ರಾದೇಶಿಕ ಸಂಸ್ಕೃತಿಯನ್ನು ಗೌಣಗೊಳಿಸುವುದು: ಪುರುಷೋತ್ತಮ ಬಿಳಿಮಲೆ

Update: 2022-06-12 22:08 IST

ಬೆಂಗಳೂರು, ಜೂ. 12: ‘ಪರಿಷ್ಕೃತ ಪಠ್ಯಪುಸ್ತಕಗಳ ಮೂಲ ಉದ್ದೇಶವೇ ಪ್ರಾದೇಶಿಕ ಸಂಸ್ಕೃತಿಯನ್ನು ಗೌಣಗೊಳಿಸುವುದು ಎಂಬ ಅರ್ಥದಲ್ಲಿ, ಪ್ರಾದೇಶಿಕ ಅಸ್ಮಿತೆಯನ್ನು ತ್ಯಜಿಸಿ ರಾಷ್ಟ್ರೀಯ ಅಸ್ಮಿತೆಯನ್ನು ಕಟ್ಟಬೇಕು ಎಂದು ಮಂಗಳೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಪಿ.ಎಲ್.ಧರ್ಮ ಕರೆಕೊಟ್ಟಿರುವುದು ಖಂಡನಾರ್ಹ' ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಕಿಡಿಕಾರಿದ್ದಾರೆ. 

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ‘ಪರಿಷ್ಕೃತ ಪಠ್ಯ ಪುಸ್ತಕಗಳ ಪರವಾಗಿ ಮಾಜಿ ಸಚಿವ ಸಿ.ಟಿ. ರವಿ ಅವರ ಜೊತೆ ಕುಳಿತುಕೊಂಡು ಈ ಮಾತುಗಳನ್ನು ಪ್ರೊ.ಪಿ.ಎಲ್.ಧರ್ಮ ಅವರು ಹೇಳಿದ್ದಾರೆ. ಅವರ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಕುವೆಂಪು, ಬಸವಣ್ಣ ಮತ್ತು ಅಂಬೇಡ್ಕರ್ ಅವರಿಗೆ ಸ್ಥಾನವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಾದೇಶಿಕವಲ್ಲದ ರಾಷ್ಟ್ರೀಯತೆ ಎಂದರೇನು, ಅದನ್ನು ಕಟ್ಟುವ ಪರಿಕರಗಳು ಯಾವುವು, ಅದರಲ್ಲಿ ಯಾರಿಗೆಲ್ಲ ಜಾಗ ಇರುತ್ತದೆ. ರಶಿಯಾ ಉಕ್ರೇನಿನ ಗಡಿಯನ್ನು ನಮ್ಮ ಕಣ್ಣೆದುರೇ ಬದಲಾಯಿಸುತ್ತಿರುವ ಈ ಸನ್ನಿವೇಶದಲ್ಲಿ ರಾಷ್ಟ್ರದ ಗಡಿರೇಖೆಗಳನ್ನು ಎಲ್ಲಿಗೆ ನಿಲ್ಲಿಸೋಣ, ಕನ್ನಡ, ತುಳು, ಕೊಡವ, ಅರೆಭಾಷೆ, ಪಂಪ, ಬಸವ,ಅಕ್ಕ,  ಕುವೆಂಪು, ಯಕ್ಷಗಾನ, ಮಲೆಯ ಮಾದೇಶ್ವರ, ಜುಂಜಪ್ಪ, ಬೀರಪ್ಪ, ಮೈಲಾರ, ಮೊದಲಾದುವುಗಳನ್ನು  ಗೌಣಗೊಳಿಸಿ ಕಟ್ಟುವ ರಾಷ್ಟ್ರೀಯತೆಯಲ್ಲಿ ಸ್ವತ: ಪ್ರೊ. ಧರ್ಮ ಎಲ್ಲಿರುತ್ತಾರೆ' ಎಂದು ಪ್ರಶ್ನಿಸಿದ್ದಾರೆ.

‘ಭಾರತದಂಥ ಬಹುಭಾಷಾ ಸಂಸ್ಕೃತಿಯ ನೆಲದಲ್ಲಿ ಕಟ್ಟಲಾಗುವ ರಾಷ್ಟ್ರೀಯತೆಗೆ ಪ್ರಾದೇಶಿಕತೆಯೇ ಬಲವಾದ ತಳಹದಿ ಆಗಿದೆ. ಪ್ರಾದೇಶಿಕತೆಯೇ ಇಲ್ಲದೆ ಕಟ್ಟುವ ಯಾವುದೇ ಕಟ್ಟಡ ಬಹುಬೇಗ ಕುಸಿಯುತ್ತದೆ' ಎಂದು ಪುರುಷೋತ್ತಮ ಬಿಳಿಮಲೆ ಅವರು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News