ಓ ಮೆಣಸೇ...

Update: 2022-06-12 18:38 GMT

ಡಾ.ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟಿದ್ದು ಯಾಕೆ ಎಂದು ಬಿಜೆಪಿಯವರು ಉತ್ತರಿಸಲಿ -ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಅಕ್ರಮ ಮತ್ತು ಅಧರ್ಮ ಮಾತ್ರ ಗೊತ್ತಿರುವವರೊಡನೆ ಇಂತಹ ಪ್ರಶ್ನೆ ಕೇಳಿ ಅವರನ್ನೇಕೆ ಬೇಸ್ತು ಬೀಳಿಸ್ತೀರಿ ಸಾರ್?

ಚಡ್ಡಿ ಇದ್ದದ್ದರಿಂದ ದೇಶದಲ್ಲಿ ಒಳ್ಳೆಯ ವಾತಾವರಣವಿದೆ - ರಘುಪತಿ ಭಟ್, ಶಾಸಕ
ಬಿಲದೊಳಗಿನ ಕರಾಳ ವಾತಾವರಣ ಹೆಗ್ಗಣಕ್ಕೆ ಒಳ್ಳೆಯದೆನಿಸುತ್ತದೆ. ಕೈ ನಾಯಕರು ಈಗ ಚಡ್ಡಿ ಸುಟ್ಟು ಬೆತ್ತಲಾಗಲು ಹೊರಟಿದ್ದಾರೆ - ಸುನೀಲ್ ಕುಮಾರ್, ಸಚಿವ
ನಿಮ್ಮ ಚಡ್ಡಿ ಸುಟ್ಟರೆ ಅವರು ಬೆತ್ತಲಾಗುವುದು ಹೇಗೆ?

ಸಿದ್ದು-ಡಿಕೆಶಿಯಂತಹ ನೂರು ಜನ ನೂರು ಜನ್ಮ ಎತ್ತಿ ಬಂದರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ - ಕುಮಾರಸ್ವಾಮಿ, ಮಾಜಿ ಸಿಎಂ
ಅದನ್ನು ಮಾಡುವುದಕ್ಕೆ ಸಾಕ್ಷಾತ್ ನೀವೇ ಇರುವಾಗ ಅವರ ಅಗತ್ಯ ಏನಿದೆ?

ಬಿಜೆಪಿ ಸರ್ವರ ಅಭಿವೃದ್ಧಿಗೆ ಯತ್ನಿಸುತ್ತಿದ್ದರೂ ಅಲ್ಪಸಂಖ್ಯಾತರ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ - ಜಮಾಲ್ ಸಿದ್ದೀಕಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾ. ಅಧ್ಯಕ್ಷ
ವರಸೆ ನೋಡಿದರೆ, ನಿಮ್ಮ ಅಭಿವೃದ್ಧಿಗೆ ಬಹಳ ದೊಡ್ಡ ಗಂಟು ಸಿಕ್ಕಿದಂತಿದೆಯಲ್ಲಾ!

ಸಾಹಿತಿಗಳು ಚಳವಳಿಗಳಿಗೆ ಮಾತ್ರ ಸೀಮಿತವಾಗಬಾರದು - ಎಸ್.ಎಲ್.ಭೈರಪ್ಪ, ಸಾಹಿತಿ
ಮನುವಾದವನ್ನು ಸ್ಥಾಪಿಸುವ ಕೆಲಸವನ್ನೂ ಮಾಡುತ್ತಿರಬೇಕೇ?

ಭಾರತ ಮತ್ತೆ ವಿಶ್ವಗುರು ಸ್ಥಾನಕ್ಕೇರುವ ಕಾಲ ಸನ್ನಿಹಿತವಾಗಿದೆ - ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
ಮನದೊಳಗಿನ ವಿಶ್ವವು ಸಣ್ಣದಾಗುತ್ತಾ ಹೋದಂತೆ, ಆ ಸಣ್ಣ ಜಗತ್ತಿನಲ್ಲಿ ಗುರುವಾಗಿ ಮೆರೆಯುವ ಅವಕಾಶ ಹೆಚ್ಚುತ್ತದೆ.

ಕಾಂಗ್ರೆಸ್‌ನವರಿಗೆ ಧರ್ಮ ರಕ್ಷಣೆ ಮಾಡಲು ಆಗುವುದಿಲ್ಲ - ಬಿ.ಸಿ.ಪಾಟೀಲ್, ಸಚಿವ
ಆದ್ದರಿಂದ ಅವರು ಒಂದಷ್ಟು ರಾಜಕೀಯ ಮಾಡುತ್ತಿರುತ್ತಾರೆ.

ಕುಟುಂಬ ರಾಜಕಾರಣದ ವಿರುದ್ಧ ನನ್ನ ಅನಿಸಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ - ನರೇಂದ್ರ ಮೋದಿ, ಪ್ರಧಾನಿ
ನೀವು 'ಪರಿವಾರ್ ವಾದ್' ಎಂದಾಗ ಸಂಘದವರು, ಮುನಿಸಿಕೊಂಡು 'ನಮ್ಮ ಬೆಕ್ಕು ನಮಗೆ ಮಿಯಾಂವ್ ಅನ್ನುತ್ತಿದೆ' ಎಂದು ಕಿರುಚಾಡಿದರೇ ?

ಆರೆಸ್ಸೆಸ್‌ನ ಚಡ್ಡಿ ಪ್ರಭಾವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಏನು ಗೊತ್ತು? - ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಅವರಿಗೆ ಗೊತ್ತಿರುವುದು, ಕೆಲವರು 40 ಶೇ. ಕಮಿಷನ್ ಅನ್ನು ಬಚ್ಚಿಡಲು ತಮ್ಮ ಚಡ್ಡಿಯ ಕಿಸೆಗಳನ್ನು ನಿತ್ಯ ಬಳಸಲಾಗುತ್ತಿತ್ತು ಎಂಬ ಅಂಶ ಮಾತ್ರ.

ಕಾಶ್ಮೀರವನ್ನು ನಿಯಂತ್ರಿಸಲು ಬಿಜೆಪಿಯಿಂದ ಸಾಧ್ಯವಿಲ್ಲ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಆದ್ದರಿಂದ ಅವರೀಗ ಭಾರತೀಯರ ಸ್ವಾತಂತ್ರವನ್ನು ನಿಯಂತ್ರಿಸಿ ನಿರ್ಬಂಧಿಸು ವುದರಲ್ಲಿ ನಿರತರಾಗಿದ್ದಾರೆ.

ಆರೆಸ್ಸೆಸ್ ಚಡ್ಡಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ವರ್ಷವಾಯಿತು. ಈಗ ನಮ್ಮ ಗಣವೇಶ ಪ್ಯಾಂಟ್ ಮತ್ತು ಅಂಗಿ - ರಘುಪತಿ ಭಟ್, ಶಾಸಕ
ಚಡ್ಡಿ ಕಳಕೊಂಡಿದ್ದನ್ನು ಜಗತ್ತು ನೋಡಿದೆ. ನಾಝಿ ಸೆಲ್ಯೂಟ್ ಅನ್ನು ಯಾವಾಗ ಬಿಡುತ್ತೀರಿ?

ಬಿಜೆಪಿ ರೀತಿಯಲ್ಲಿಯೇ ರಾಜ್ಯದಲ್ಲಿ ಜೆಡಿಎಸ್ ಕಟ್ಟುವೆ - ಕುಮಾರಸ್ವಾಮಿ, ಮಾಜಿ ಸಿಎಂ
ಬಿಜೆಪಿಯೇ ನಿಮ್ಮ ಮುಂದಿರುವ ಪರಮ ಆದರ್ಶ ಎಂಬುದನ್ನು ಕೊನೆಗೂ ಒಪ್ಪಿಕೊಂಡಿರಲ್ಲ !

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದೇಹದಲ್ಲಿ ಹೆಡಗೆವಾರ್ ದೆವ್ವ ಹೊಕ್ಕಿದೆ - ಕುಂ.ವೀರಭದ್ರಪ್ಪ, ಸಾಹಿತಿ
ಹಾಗೆಲ್ಲಾ ಹೇಳಬೇಡಿ. ದೆವ್ವಗಳಿಗೂ ಮಡಿ ಪ್ರಜ್ಞೆ ಇರುತ್ತಂತೆ.

ಮಾಜಿ ಸಿಎಂ ಸಿದ್ದರಾಮಯ್ಯ ಈಗೀಗ ಪುಂಡ ಪೋಕರಿಯಂತೆ ಮಾತನಾಡುತ್ತಿದ್ದಾರೆ - ಜಗದೀಶ್ ಶೆಟ್ಟರ್, ಶಾಸಕ
ಅವರು ಹಿಂದೆಯೂ ಪುಂಡ ಪೋಕರಿಗಳ ಜೊತೆ ಹಾಗೆಯೇ ಮಾತನಾಡುತ್ತಿದ್ದರು.

ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರ ಬದಲಿಸುವ ಪ್ರಸ್ತಾವ ಇಲ್ಲ - ಆರ್‌ಬಿಐ
ಇದೇನು, ನೋಟುಗಳಲ್ಲಿ ಗೋಡ್ಸೆ ಚಿತ್ರ ಹಾಕುವುದಕ್ಕೆ ಮುನ್ನುಡಿ ಅಲ್ಲ ತಾನೇ?

ಪಠ್ಯ ಪರಿಷ್ಕರಣೆ ಸಮಿತಿಗೆ ಸೇರಿದಾಗ ನಾನು ಉಬ್ಬಿಯೂ ಇಲ್ಲ, ಈಗ ಕುಗ್ಗಿಯೂ ಇಲ್ಲ - ರೋಹಿತ್ ಚಕ್ರತೀರ್ಥ
ಕೊಳೆತವರಿಗೆ ತಾವು ಉಬ್ಬಿದ್ದು, ಕುಗ್ಗಿದ್ದು ಎರಡೂ ಗೊತ್ತಾಗಲ್ಲ. ಗೊತ್ತಾಗುವುದು ದುರ್ನಾತ ಅನುಭವಿಸಿದವರಿಗೆ ಮಾತ್ರ. ಪ್ರಬಲ ಪ್ರತಿಪಕ್ಷಗಳು ಈ ದೇಶದ

ಪ್ರಜಾಪ್ರಭುತ್ವ ವ್ಯವಸ್ಥೆಯ ಉತ್ತಮ ಸ್ಥಿತಿ ಕಾಯಲು ಅಗತ್ಯ - ನರೇಂದ್ರ ಮೋದಿ, ಪ್ರಧಾನಿ
ಆದ್ದರಿಂದ ಪ್ರತಿಪಕ್ಷದ ಸಾಲುಗಳಲ್ಲಿ ಕೂರಲು ತಯಾರಾಗಿರಿ.

ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಶೋಧನಾ ಕ್ಷೇತ್ರ ಅಗತ್ಯ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಮಸೀದಿಗಳ ನೆಲ ಮಾಳಿಗೆ ಬಿಟ್ಟರೆ ಬೇರೆಲ್ಲಾದರೂ ಸಂಶೋಧನೆ ನಡೆಸಿದ ಅನುಭವವೇನಾದರೂ ನಿಮಗಿದೆಯೇ?

ಚಡ್ಡಿ ಎನ್ನುವುದು ಮಾನವ ಕುಲದ ಗೌರವ ಕಾಪಾಡುವ ಸಂಕೇತ - ಛಲವಾದಿ ನಾರಾಯಣ ಸ್ವಾಮಿ, ವಿ.ಪ. ಸದಸ್ಯ
ಹಾಗಾದರೆ ಅದನ್ನು ತಲೆ ಮೇಲೆ ಧರಿಸಿಕೊಳ್ಳುವಿರಾ?

ನಾನು ತತ್ವ, ನೀತಿಯ ರಾಜಕಾರಣ ಮಾಡಿದ್ದೇನೆಯೇ ಹೊರತು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ - ಸಿ.ಟಿ.ರವಿ, ಶಾಸಕ
ನಿಮ್ಮ ಡಿಕ್ಶನರಿಯಲ್ಲಿ ದ್ವೇಷಕ್ಕೆ ತತ್ವ ಮತ್ತು ವಂಚನೆಗೆ ನೀತಿ ಎಂಬ ಅರ್ಥವಿದೆಯೇ?

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರೂ ಪಕ್ಷಗಳಿಂದ ರಾಜ್ಯದ ಜನತೆಗೆ ದ್ರೋಹವಾಗಿದೆ - ಮುಖ್ಯಮಂತ್ರಿ ಚಂದ್ರು, ಮಾಜಿ ವಿ.ಪ. ಸದಸ್ಯ
ಆಪ್ ಪಾರ್ಟಿಯನ್ನು ಬಿಟ್ಟ ಬಳಿಕ ಆ ಪಕ್ಷದ ಹೆಸರನ್ನೂ ಈ ನಿಮ್ಮ ಮಾಜಿ ಪಕ್ಷಗಳ ಪಟ್ಟಿಗೆ ಸೇರಿಸಿ.

ನಾನು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳಿಗೆ ನನ್ನ ಸಮ್ಮತಿ ಇಲ್ಲ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಹಾಗೆಯೇ, ನೀವು ಮುಂದಿನ ಪ್ರಧಾನ ಮಂತ್ರಿ ಎಂಬ ಘೋಷಣೆಗೂ ಸಮ್ಮತಿ ನೀಡಬೇಡಿ.

ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಡಗೆವಾರ್ ಬಗ್ಗೆ ಆಧ್ಯಯನ ಮಾಡಿ ತಿಳಿದುಕೊಂಡರೆ ಅವರು ಖಂಡಿತಾ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುತ್ತಾರೆ - ಮುರುಗೇಶ್ ನಿರಾಣಿ, ಸಚಿವ
ಅಧ್ಯಯನ ಅಷ್ಟರ ಮಟ್ಟಿಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಾಯಿತು.

ಭಾರತದಲ್ಲಿ ಅಸಹಿಷ್ಣುತೆ, ಧರ್ಮ ದ್ವೇಷ ಆರೋಪಗಳಲ್ಲಿ ಹುರುಳಿಲ್ಲ - ಅರುಣ್ ಸಿಂಗ್, ಬಿಜೆಪಿ ಮುಖಂಡ
ಜನಸಾಮಾನ್ಯರ ಪಾಲಿನ ಉರುಳಷ್ಟೇ ಇದೆ.

ಪಠ್ಯಪುಸ್ತಕದ ಭೂತ ಕಾಂಗ್ರೆಸ್ ಸೃಷ್ಟಿ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಒಟ್ಟಿನಲ್ಲಿ ಪಠ್ಯ ಪುಸ್ತಕವನ್ನು ಭೂತ ಕಾಲಕ್ಕೆ ಸೇರಿಸುವುದು ನಿಮ್ಮ ಗುರಿ ಎಂದು ಕಾಣುತ್ತದೆ

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...