ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದ ಜೆಡಿಎಸ್ ಎಂಎಲ್ಸಿ
ಮಂಗಳೂರು: 'ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಜಿ. ಮಾದೇಗೌಡ ಅವರು ಗೆಲ್ಲುತ್ತಾರೆ. ಅವರಿಗೆ ಕ್ಷೇತ್ರದ ನಾಲ್ಕೂ ಜಿಲ್ಲೆಗಳಲ್ಲಿ ಹೆಚ್ಚಿನ ಬೆಂಬಲ ಇದೆ' ಎಂದು ಹೇಳುವ ಮೂಲಕ ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತನ್ನ ಪಕ್ಷದ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೀಲಾರ ಜಯರಾಮು ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮರಿತಿಬ್ಬೇಗೌಡ, 'ಜೆಡಿಎಸ್‍ನಲ್ಲಿ ಅಭ್ಯರ್ಥಿಯಾಗಲು ಹಣವೇ ಮುಖ್ಯ ಹೊರತು ಅಭ್ಯರ್ಥಿಯಲ್ಲ' ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಇದೀಗ ಸೋಮವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, 'ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಅಲೆ ಇರುವುದರಿಂದ ಅವರು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ' ಎಂದು ಹೇಳಿದರು.
ಈ ಕ್ಷೇತ್ರ ಒಕ್ಕಲಿಗರ ಭದ್ರಕೋಟೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಯಾವ ಜನಾಂಕ್ಕೂ ಭದ್ರಕೋಟೆ ರಾಜಕಾರಣ ಶಾಶ್ವತ ಅಲ್ಲ.ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನೇ ಕೊಡಿ ಎಂದು ನಾನು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದರು.