ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ: ಹೈಕೋರ್ಟ್ ಆದೇಶ

Update: 2022-06-13 11:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.13: ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ(ಆರ್‍ಜಿಯುಎಚ್‍ಎಸ್) ವಿವಿಧ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಪದವಿಯ ಅಂತಿಮ ವರ್ಷದ 41 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ಪರೀಕ್ಷೆಯಲ್ಲಿ ನೀಡಲಾಗಿದ್ದ ಅಂಕಗಳನ್ನು ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರ ವಿದ್ಯಾರ್ಥಿಗಳಿಗೆ ಮುಂದಿನ 21 ದಿನದೊಳಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಆದೇಶ ನೀಡಿದೆ.   

ಆರ್‍ಜಿಯುಎಚ್‍ಎಸ್ ನಡೆಸಿರುವ ಪ್ರಾಯೋಗಿಕ ಪರೀಕ್ಷೆಯು ವಿವಿಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿ ಬಸವರಾಜ ಇಟಗಿ ಸೇರಿ ವಿವಿಧ ವೈದ್ಯಕೀಯ ಕಾಲೇಜುಗಳ ಒಟ್ಟು 41 ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಾಯೋಗಿಕ ಪರೀಕ್ಷೆಗಳನ್ನು ವಿವಿಯ ಮಾರ್ಗಸೂಚಿ ಅನುಸಾರ ನಡೆಸದ ಹಿನ್ನೆಲೆಯಲ್ಲಿ ಅರ್ಜಿದಾರ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಅಂಕಗಳನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಆರ್‍ಜಿಯುಎಚ್‍ಎಸ್ ಪರ ವಾದಿಸಿ ವಕೀಲರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ಪೀಠಕ್ಕೆ ಮುಚ್ಚಳಿಕೆ ನೀಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರ ವಿದ್ಯಾರ್ಥಿಗಳು ಕೋರಿರುವ ವಿಷಯಗಳಿಗೆ ಹೊಸ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News