ಚಿಕ್ಕಮಗಳೂರು: ಕಲುಷಿತ ನೀರು ಸೇವಿಸಿ 9 ಮಕ್ಕಳು ಸೇರಿ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Update: 2022-06-13 13:52 GMT

ಚಿಕ್ಕಮಗಳೂರು, ಜೂ.13: ನಗರದ ವಿವಿಧ ಬಡಾವಣೆಗಳಲ್ಲಿ ಕಲುಷಿತ ನೀರು ಸೇವಿಸಿ 9ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ವಾಂತಿಬೇಧಿಯಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ನಗರದ ಟಿಪ್ಪುನಗರ ಮತ್ತು ಮಾರ್ಕೆಟ್‍ರಸ್ತೆಗೆ ಹೊಂದಿಕೊಂಡಿರುವ ಶಾಂತಿನಗರದಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರ್ಪಡೆಗೊಂಡಿದ್ದು, ಮಣ್ಣು, ಸಣ್ಣ ಗಾತ್ರದ ಹುಳು ಮಿಶ್ರಿತ ನೀರು ಈ ಬಡಾವಣೆಗಳಿಗೆ ಪೂರೈಕೆಯಾಗಿದೆ. ಕಳೆದ ಒಂದು ವಾರದಿಂದ ಈ ನೀರನ್ನೇ ಸೇವಿಸಿದ ಪರಿಣಾಮ ಟಿಪ್ಪುನಗರ ಹಾಗೂ ಸಂತೇಮಾರ್ಕೆಟ್ ಬಡಾವಣೆಯ ನಿವಾಸಿಗಳ ಪೈಕಿ 9 ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ವಾಂತಿಬೇಧಿಯಿಂದ ಬಳಲಿ ಜಿಲ್ಲಾಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ನಗರದ ಸಂತೇಮಾರ್ಕೆಟ್ ಬಡಾವಣೆಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಈ ಬಡಾವಣೆಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಕಳೆದೊಂದು ವಾರದಿಂದ ಆಗಾಗ್ಗೆ ನಗರಸಭೆ ಪೂರೈಕೆ ಮಾಡಿದ್ದ ನೀರಿನಲ್ಲಿ ಮಣ್ಣು, ಹುಳುಗಳು ಪತ್ತೆಯಾಗಿವೆ. ಇದನ್ನು ಗಮನಿಸದೇ ನೀರು ಕುಡಿದವರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ಪ್ರತಿದಿನ ಈ ಬಡಾವಣೆಗಳ ಜನರು ವಾಂತಿಬೇಧಿಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವಾಂತಿಬೇಧಿಯಿಂದ ಬಳಲುತ್ತಿರುವವರ ಪೈಕಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಎಂದು ಸೋಂಕಿಗೆ ತುತ್ತಾಗಿರುವ ಮಕ್ಕಳ ಪೋಷಕರು ಆರೋಪಿಸಿದ್ದಾರೆ.

ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿರುವ ಬಗ್ಗೆ ನಗರಸಭೆ ಆರೋಗ್ಯ ನಿರೀಕ್ಷಕರಿಗೆ ದೂರು ಹೇಳಿಕೊಂಡರೂ ಸೌಜನ್ಯಕ್ಕೂ ಭೇಟಿ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ. ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿರುವವರ ಜೀವಕ್ಕೆ ತೊಂದರೆಯಾದಲ್ಲಿ ಇದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಕಾರಣ ಎಂದು ಆರೋಪಿಸಿರುವ ಪೋಷಕರು, ಕುಟುಂಬಸ್ಥರು, ಕಲುಷಿತ ನೀರು ಪೂರೈಕೆಯಾಗುತ್ತಿರುವುದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರದ ಪ್ರತೀ ವಾರ್ಡಿನಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಬೇಕೆಂದು ಸರಕಾರದ ಸುತ್ತೋಲೆ ಇದೆ. ಆದರೆ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಖಾಸಗಿ ನೀರು ಪೂರೈಕೆದಾರರ ಲಾಬಿಗೆ ಮಣಿದು ಬಡವರು ವಾಸಿಸುವ ಬಡಾವಣೆಗಳಲ್ಲಿ ಶುದ್ಧಗಂಗಾ ಘಟಕಗಳನ್ನು ನಿರ್ಮಿಸಲು ಮುಂದಾಗಿಲ್ಲ. ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಇರುವ ವಾರ್ಡ್‍ಗಳಲ್ಲಿ ಶುದ್ಧಗಂಗಾ ಘಟಕಗಳನ್ನು ನಿರ್ಮಿಸಲಾಗಿದೆ. ಬಡವರು ವಾಸಿಸುವ ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಟಿಪ್ಪು ನಗರ, ಸಂತೇಮಾರ್ಕೆಟ್ ಬಡಾವಣೆಗಳಲ್ಲಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. 

- ದಂಟರಮಕ್ಕಿ ಶ್ರೀನಿವಾಸ್, ದಸಂಸ ಮುಖಂಡ

ಕಳೆದೊಂದು ವಾರದಿಂದ ಕಲುಷಿತ ನೀರು ಸೇವಿಸುತ್ತಿದ್ದರೂ ನಗರಸಭೆಯ ಆರೋಗ್ಯ ನಿರೀಕ್ಷಕರು ಅತ್ತ ಗಮನಹರಿಸಿಲ್ಲ, ವಿವಿಧ ಸಂಘಟನೆಗಳ ಮುಖಂಡರು ವಿಷಯವನ್ನು ಹೆಲ್ತ್ ಇನ್ಸ್‍ಪೆಕ್ಟರ್ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳಚೆ ಪ್ರದೇಶಗಳಲ್ಲಿ ಸಾಂಕ್ರಮಿಕ ರೋಗದ ಭೀತಿಯೂ ಉಂಟಾಗಿದೆ. ಈ ಸಂಬಂಧ ನಗರಸಭೆಗೆ ಹಲವಾರಿ ಮನವಿ ಮಾಡಿದ್ದರೂ ಏನು ಆಗಿಲ್ಲ. ಒಂದೇ ವಾರ್ಡಿನಲ್ಲಿ ಕಲುಷಿತ ನೀರು ಸೇವಿಸಿ ವಾಂತಿಬೇಧಿಯಿಂದ ಬಳಲುತ್ತಿರುವವರಿಗೆ ಇತರ ರೋಗಿಗಳು ಇರುವ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ವಾರ್ಡಿನಲ್ಲಿ ಹೆಚ್ಚು ಜನರನ್ನು ದಾಖಲು ಮಾಡಿಕೊಳ್ಳಲಾಗಿದೆ. ಸಾಂಕ್ರಮಿಕ ರೋಗಿಗಳು ಮತ್ತು ಇತರ ಕಾಯಿಲೆಯವರನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. 

- ಗೌಸ್ ಮುನೀರ್, ಎಸ್‍ಡಿಪಿಐ ಮುಖಂಡ


ವಾಂತಿಬೇಧಿಯಿಂದ 11 ಮಕ್ಕಳು ಸೇರಿದಂತೆ 26ಕ್ಕೂ ಹೆಚ್ಚು ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕಲುಷಿತ ನೀರು ಸೇವೆನೆ ಹಾಗೂ ಸಾಂಕ್ರಮಿಕ ರೋಗಗಳು ಇದಕ್ಕೆ ಕಾರಣ. ಕಳೆದ ಮೂರು ದಿನಗಳಿಂದ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಕಲುಷಿತ ನೀರು ಪೂರೈಕೆ ಬಗ್ಗೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಆರೋಗ್ಯಾಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಅವರುಗಳು ಕೊಳಚೆ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲಿಸುತ್ತಿದ್ದಾರೆ. ಮಳೆಗಾಲವಾಗಿರುವುದರಿಂದ ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚು ಸೀರಿಯಸ್ ಆದವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಡ್ ಸಮಸ್ಯೆ ಹಾಗೂ ಸ್ಥಳವಕಾಶದ ಕೊರತೆಯಿಂದ ವಿವಿಧ ರೋಗಿಗಳನ್ನು ಒಂದೇ ವಾರ್ಡಿನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ.

- ಮೋಹನ್‍ಕುಮಾರ್ ,ಜಿಲ್ಲಾಸರ್ಜನ್


ಟಿಪ್ಪುನಗರ ಮತ್ತು ಶಾಂತಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಉತ್ತಮ ಗುಣಮಟ್ಟದ ಕುಡಿಯುವ ನೀರು ನೀಡಲಾಗುತ್ತಿದೆ. ಈ ಭಾಗದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಕೆಲವು ದಿನಗಳ ಹಿಂದೆ ನಗರಸಭೆ ವತಿಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯಕೈಗೊಳ್ಳಲಾಗಿದೆ. ಡ್ರಮ್ ಮತ್ತು ಬಾಟಲಿಗಳಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿಕೊಳ್ಳುತ್ತಿದ್ದು, ಸರಿಯಾಗಿ ಮುಚ್ಚಳ ಮುಚ್ಚುವುದಿಲ್ಲ, ಇಂತಹ ನೀರು ಕುಡಿದ ಪರಿಣಾಮ ವಾಂತಿ ಬೇಧಿ ಕಾಣಿಸಿಕೊಂಡಿರಬಹುದು. ಈ ಕುರಿತು ಸಾರ್ವಜನಿಕ ತಿಳುವಳಿಕೆಯನ್ನು ನೀಡಲಾಗುವುದು.

- ವೇಣುಗೋಪಾಲ್, ನಗರಸಭೆ ಅಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News