ಮಂಡ್ಯ; ತಡರಾತ್ರಿ ನವವಧುವನ್ನು ಠಾಣೆಗೆ ಕರೆದೊಯ್ದ ಪೊಲೀಸರು: ಆರೋಪ

Update: 2022-06-13 14:43 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಜೂ.13: ಪ್ರೀತಿಸಿ ಮದುವೆಯಾದ ಪತಿಯ ಮನೆಯಲ್ಲಿದ್ದ ನವವಧುವನ್ನು ಪೊಲೀಸರು ಮಧ್ಯರಾತ್ರಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಹಿಳಾ ಪೇದೆ ಇಲ್ಲದೆ ಏಕಾಏಕಿ ತಡರಾತ್ರಿ ಮನೆಗೆ ನುಗ್ಗಿ ವಧುವನ್ನು ಠಾಣೆಗೆ ಕರೆತಂದಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ವಕೀಲ, ಪ್ರಗತಿಪರ ಹೋರಾಟಗಾರ ಲಕ್ಷ್ಮಣ್ ಚೀರನಹಳ್ಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ತಾಲೂಕು ಚೀರನಹಳ್ಳಿಯ ಗಂಗಾ ಮತಸ್ಥರ ಬಲ್ಲೇಶ ಮತ್ತು ಕೋಲಾರ ಜಿಲ್ಲಾ ಶಿಡ್ಲಘಟ್ಟದ ಲಿಂಗಾಯತ ಕೋಮಿನ ಭಾಗ್ಯ ಎಂಬುವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ಕಳೆದ ಜೂ.8ನೇ ತಾರೀಕು ರಿಜಿಸ್ಟರ್ ಮದುವೆಯಾಗಿದ್ದಾರೆ. ನಂತರ ಇಬ್ಬರೂ ಚೀರನಹಳ್ಳಿಯ ಬಲ್ಲೇಶನ ಮನೆಯಲ್ಲಿ ವಾಸವಿದ್ದಾರೆ.

ಈ ಸಂಬಂಧ ಶಿಡ್ಲಘಟ್ಟ ಠಾಣೆಯಲ್ಲಿ ಭಾಗ್ಯ ಪೋಷಕರು ದೂರು ನೀಡಿದ್ದರೆನ್ನಲಾಗಿದ್ದು, ಆ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಪೊಲೀಸರು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರ ಜತೆಗೂಡಿ ಚೀರನಹಳ್ಳಿಯ ಬಲ್ಲೇಶನ ಮನೆಗೆ ಶನಿವಾರ ತಡರಾತ್ರಿ ನುಗ್ಗಿ ಬಲವಂತವಾಗಿ ನವವಧುವನ್ನು ಮಂಡ್ಯ ಗ್ರಾಮಾಂತರ ಠಾಣೆಗೆ ಕರೆದೊಯ್ದಿದ್ದಾರೆ.

ವಿಷಯ ತಿಳಿದ ವಕೀಲ, ಹೋರಾಟಗಾರ, ಪತ್ರಕರ್ತ ಲಕ್ಷ್ಮಣ್ ಚೀರನಹಳ್ಳಿ ಜಿ.ಪಂ ಮಾಜಿ ಸದಸ್ಯ ಮಂಜುನಾಥ್ ಜತೆಗೂಡಿ ಠಾಣೆಗೆ ತೆರಳಿ, ‘ಮಹಿಳಾ ಪೊಲೀಸ್ ಇಲ್ಲದೆ ಹೆಣ್ಣುಮಗಳನ್ನು ನೆಟ್ಟನಡುರಾತ್ರಿ ಠಾಣೆಗೆ ಕರೆತಂದಿರುವುದು ಸರಿಯಲ್ಲ. ಇದು ಕಾನೂನು ಉಲ್ಲಂಘನೆ’ ಎಂದು ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ.

“ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನವವಧುವನ್ನು ವಿಚಾರಣೆಗೆ ಕರೆತಂದಿರುವುದು ಸರಿ. ಆದರೆ ಆರೋಪಿಗಳಂತೆ  ಮನೆ ಮೇಲೆ ದಾಳಿ ಮಾಡಿ, ಮಹಿಳಾ ಪೇದೆಯೂ ಇರದೇ ನಡುರಾತ್ರಿ ಠಾಣೆಗೆ ಅಟ್ಟಿಕೊಂಡು ಬರುವುದು ಎಷ್ಟು ಸರಿ? ರಾತ್ರಿ ಎರಡು ಗಂಟೆಗೆ ಎಸ್ಪಿ ಯತೀಶ್ ಅವರಿಗೆ ಫೋನಾಯಿಸಿ ಘಟನೆ ವಿವರಿಸಿದೆ. ಅವರು ತಕ್ಷಣ ಸ್ಪಂದಿಸಿ  ನೆರವಿಗೆ ನಿಂತು ದೊಡ್ಡತನ ಮೆರೆದಿದ್ದಾರೆ.”

-ಲಕ್ಷ್ಮಣ್ ಚೀರನಹಳ್ಳಿ, ವಕೀಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News