ವಿಧಾನ ಪರಿಷತ್ ನಾಲ್ಕೂ ಕ್ಷೇತ್ರಗಳ ಚುನಾವಣೆ ಶಾಂತಿಯುತ ಅಂತ್ಯ: ಒಟ್ಟಾರೆ ಶೇ.65ರಷ್ಟು ಮತದಾನ

Update: 2022-06-13 14:48 GMT

ಬೆಂಗಳೂರು, ಜೂ. 13: ವಿಧಾನ ಪರಿಷತ್ತಿನ ವಾಯವ್ಯ ಮತ್ತು ದಕ್ಷಿಣ ಪದವೀಧರರ ಕ್ಷೇತ್ರಗಳು ಹಾಗೂ ವಾಯವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಹನ್ನೊಂದು ಜಿಲ್ಲೆಗಳ ವ್ಯಾಪ್ತಿಯಲ್ಲಿಂದು ಜರುಗಿದ ಚುನಾವಣೆ ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದ್ದು, ನಾಲ್ಕೂ ಕ್ಷೇತ್ರಗಳಲ್ಲಿ ಒಟ್ಟಾರೆ ಈವರೆಗೆ ಶೇ.65ರಷ್ಟು ಮತದಾನವಾಗಿದೆ.

ಮಾಜಿ ಸಭಾಪತಿ, ಬಿಜೆಪಿ ಅಭ್ಯರ್ಥಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ಸೇರಿದಂತೆ 49 ಮಂದಿ ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದಾನೆ. ಜೂ.15ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಪ್ರಕಟವಾಗಲಿರುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. 11 ಜಿಲ್ಲೆಗಳ ಒಟ್ಟು 419 ಮತಗಟ್ಟೆಗಳಲ್ಲಿ ಬೆಳಗ್ಗೆ 8ಗಂಟೆಯಿಂದಲೇ ಮತದಾನ ಆರಂಭವಾಯಿತಾದರೂ ಮಧ್ಯಾಹ್ನದ ವೇಳೆ ಬಿರುಸು ಪಡೆದುಕೊಂಡಿತು.

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ಬರಲಿದ್ದು, ‘ಶಿಕ್ಷಿತ' ಮತದಾರರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಅತ್ಯಂತ ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪ್ರತಿಷ್ಠೆಯಾಗಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.

ವಾಯವ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟಾರೆ ಸಂಜೆ 5ರವರೆಗೆ ಶೇ.59, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಶೇ.70, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80 ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಶೇ.84ರಷ್ಟು ಮತದಾನ ನಡೆದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ವಿಜಯಮಾಲೆ ಯಾರಿಗೆ ದಕ್ಕಲಿದೆ ಎಂಬುದು ಜೂ.15ರಂದು ಗೊತ್ತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News