ಹಾಲಿನ ಖರೀದಿ ದರ ಹೆಚ್ಚಳಕ್ಕೆ ಆಗ್ರಹ; ಜೂ.15ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹಾಲು ಉತ್ಪಾದಕರ ವೇದಿಕೆ ಕರೆ
ಬೆಂಗಳೂರು, ಜೂ.13: ರಾಜ್ಯದಲ್ಲಿ ಹಾಲು ಉತ್ಪಾದನಾ ವೆಚ್ಚ ಹೆಚ್ಚಾದರೂ, ಹೈನುಗಾರಿಕೆ ಮಾಡುವವರಿಗೆ ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. ಆದುದರಿಂದ ಹೈನುಗಾರಿಕೆ ನಷ್ಟದಲ್ಲಿದೆ. ಹಾಗಾಗಿ ಹಾಲಿಗೆ ಸೂಕ್ತ ಬೆಲೆಯನ್ನು ನೀಡುವವರೆಗೂ ನಾಳೆಯಿಂದ (ಜೂ.15) ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ಕರೆ ನೀಡಿದೆ.
ಸೋಮವಾರ ಪ್ರೆಸ್ ಕ್ಲಬ್‍ನಲ್ಲಿ ಎಂ.ಆರ್. ನಾರಾಯಣಗೌಡ ಮಾತನಾಡಿ, ಹಾಲು ಒಕ್ಕೂಟಗಳಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲನ್ನು ಲೀಟರ್ ಗೆ 40ರೂ.ಗಳಿಂದ 45 ರೂ.ಗಳವರೆಗೆ ಮಾರಾಟ ಮಾಡುತ್ತಾರೆ. ಆದರೆ ಹಾಲು ಉತ್ಪಾದಕರಿಗೆ 26 ರೂ.ಗಳಿಂದ 28 ರೂ.ಗಳನ್ನು ಮಾತ್ರ ನೀಡುತ್ತಾರೆ. ಇದರಿಂದ ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ತಿಳಿಸಿದರು.
ಹಾಗೆಯೇ ಹಾಲು ಉತ್ಪಾದನೆಯ ವೆಚ್ಚ ದುಬಾರಿ ಆಗಿದೆ. ಹಸುವಿಗೆ ಹಾಕುವ ಹಿಂಡಿ, ಬೂಸ ಹಾಗೂ ಹಸಿಮೇವಿನ ಬೆಲೆ ಹೆಚ್ಚಾಗಿದೆ. ಆದರೆ ಸರಕಾರವು ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. ಗುಜರಾತ್, ಪಂಜಾಬ್ ರಾಜ್ಯಗಳಲ್ಲಿ ಒಂದು ಲೀಟರ್ ಹಾಲಿಗೆ 40 ರೂ.ಗಳವರೆಗೂ ಹಾಲು ಉತ್ಪಾದಕರಿಗೆ ಪಾವತಿ ಮಾಡಲಾಗುತ್ತದೆ. ದೇಶದಲ್ಲಿ ಎಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿಯೇ ಕಡಿಮೆ ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದರು.