10 ಸಾವಿರ ಲಂಚ ಕೇಳಿದ ಪ್ರಕರಣ: ಅಧಿಕಾರಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟ

Update: 2022-06-13 15:54 GMT

ಬೆಂಗಳೂರು, ಜೂ.13: ಸಂಘ ನೋಂದಣಿಗಾಗಿ 10 ಸಾವಿರ ಲಂಚ ಕೇಳಿದ ಆರೋಪ ಪ್ರಕರಣವೂ ಸಾಬೀತಾಗಿದ್ದು, ಈ ಸಂಬಂಧ ಸಹಕಾರ ಅಭಿವೃದ್ಧಿ ಅಧಿಕಾರಿವೊಬ್ಬರಿಗೆ 5 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2017ನೆ ಸಾಲಿನಲ್ಲಿ ಯಲಹಂಕ ನಿವಾಸಿವೊಬ್ಬರು ಕೋರಮಂಗಲದ ಧನುಷ್ ಶ್ರೀ ಅಪಾರ್ಟ್‍ಮೆಂಟ್ ಓನರ್ಸ್ ಅಸೋಸಿಯೇಷನ್ಸ್ ಹೆಸರಿನಲ್ಲಿ ಸಂಘವನ್ನು ನೋಂದಣಿ ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಪಿ.ಸದಾಶಿವ 10 ಸಾವಿರ ರೂ. ಲಂಚ ಕೇಳಿದ್ದರು.

ಈ ಸಂಬಂಧ ಅರ್ಜಿದಾರರು, ಎಸಿಬಿಗೆ ದೂರು ಸಲ್ಲಿಸಿದ್ದ ಹಿನ್ನೆಲೆ ಅಂದು ಕಾರ್ಯಾಚರಣೆ ನಡೆಸಿ, ಭ್ರಷ್ಟಾಚಾರ ಪ್ರಕರಣ ಬಯಲಿಗೆ ಎಳೆಯಲಾಗಿತ್ತು. ಆನಂತರ ತನಿಖೆ ಪೂರ್ಣಗೊಳಿಸಿ ಎಚ್.ಪಿ.ಸದಾಶಿವ ವಿರುದ್ಧ 2018ನೆ ಸಾಲಿನಲ್ಲಿ ಬೆಂಗಳೂರು ನಗರದ 23ನೆ ಸಿಟಿ ಸಿವಿಲ್ ಕೋರ್ಟಿಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗಿತ್ತು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿ ಎಚ್.ಪಿ.ಸದಾಶಿವ ಅವರಿಗೆ 5 ವರ್ಷ ಕಠಿಣ ಕಾರಾಗೃಹ ಸಜೆ, 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣ ಭಟ್ ಶಿಕ್ಷೆ ಪ್ರಕಟಿಸಿದ್ದಾರೆ. ಇನ್ನೂ, ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಸಂತೋಷ್ ನಾಗರಲೆ ವಾದ ಮಂಡಿಸಿದ್ದರು ಎಂದು ಎಸಿಬಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News