ಬಿಹಾರದಲ್ಲಿ ಯೋಧ ಅನುಮಾನಾಸ್ಪದ ಸಾವು ಪ್ರಕರಣ; ಸೇನಾಧಿಕಾರಿಗಳಿಂದ ತನಿಖೆ: ಚಿಕ್ಕಮಗಳೂರು ಡಿಸಿ

Update: 2022-06-13 17:34 GMT

ಚಿಕ್ಕಮಗಳೂರು, ಜೂ.13: ಬಿಹಾರದಲ್ಲಿ ಅನುಮಾನಾಸ್ಪದವಾಗಿ ಸವಿಗೀಡಾಗಿರುವ ತಾಲೂಕಿನ ಮಸಿಗದ್ದೆ ಗ್ರಾಮದ ಯೋಧ ಎಂ.ಎನ್.ಗಣೇಶ್ ಸಾವಿನ ಕುರಿತು ಸೇನಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸೈನ್ಯದ ವಿಚಾರವಾಗಿರುವುದರಿಂದ ಸೈನ್ಯದ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರುವ ನಿಟ್ಟಿನಲ್ಲಿ ಸೈನ್ಯದ ಅಧಿಕಾರಿಗಳು ಮೃತ ಯೋಧನ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರುವಂತೆ ಕುಟುಂಬಸ್ಥರು ತಿಳಿಸಿದ್ದು, ಸೈನ್ಯದ ಸಕಲ ಗೌರವಗಳೊಂದಿಗೆ ಕುಟುಂಬದವರು ಎಲ್ಲಿ ಮುಂದಿನ ಕಾರ್ಯ ಮಾಡಲು ಇಚ್ಚೆಪಡುತ್ತಾರೋ ಅಲ್ಲಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಮುಳ್ಳಯ್ಯನಗಿರಿ ರಸ್ತೆಯಲ್ಲಿ ಭೂಕುಸಿತ ಸಂಬಂಧ ಪ್ರತಿಕ್ರಿಯಿಸಿದ ಅವರು, ಮಳೆಗಾಲದಲ್ಲಿ ಭೂಕುಸಿತ ಸಂಭವಿಸುತ್ತದೆ. ಈ ವೇಳೆ ಪ್ರವಾಸಿಗರು, ಸ್ಥಳೀಯರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಬೇಕಾಗುತ್ತದೆ. ವಾಹನಧಟ್ಟಣೆ ನಿಯಂತ್ರಣದ ಉದ್ದೇಶದಿಂದ ಪ್ರವಾಸಿಗರ ವಾಹನ ನಿಲುಗಡೆಗೆ ಜಾಗ ಗುರುತಿಸಲಾಗಿದೆ. ಕಾಮಗಾರಿ ಆರಂಭಕ್ಕೆ ಸಣ್ಣಪುಟ್ಟ ತೊಡಕುಗಳಿದ್ದು, ಶೀಘ್ರ ನಿವಾರಿಸಲಾಗುವುದು. ಸರಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಪ್ರತ್ಯೇಕ ವಾಹನ ನಿಲ್ದಾಣ, ಫುಡ್‍ಕೋರ್ಟ್, ಖಾಸಗಿ ವಾಹನಗಳನ್ನು ವಾಹನ ನಿಲ್ದಾಣದಲ್ಲಿ ನಿಲ್ಲಿಸಿ ಅನುಮತಿ ಪಡೆದ ವಾಹನಗಳಲ್ಲಿ ಮಾತ್ರ ಪ್ರವಾಸಿಗರು ತೆರಳಲು ಅನುಮತಿ ನೀಡಲಾಗುವುದು. ಇದರಿಂದ ಗಿರಿ ಪ್ರದೇಶದಲ್ಲಿ ಸ್ವಚ್ಛತೆಗೆ ಧಕ್ಕೆಯಾಗುವುದಿಲ್ಲ, ಭೂಕುಸಿತ ಸಂಭವ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News