×
Ad

ಮೇಕೆದಾಟು ಯೋಜನೆ | ತಮಿಳುನಾಡು ಸಿಎಂ ಆಕ್ಷೇಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಚಿವ ಗೋವಿಂದ ಕಾರಜೋಳ

Update: 2022-06-14 19:02 IST

ಬೆಂಗಳೂರು, ಜೂ. 14: `ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ಪದೇ ಪದೇ ಕಾವೇರಿ ನದಿ ನೀರಿನ ವಿಚಾರದಲ್ಲಿ ಅವರು ತಕರಾರು ಮಾಡುವುದು ಸರಿಯಲ್ಲ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೇಕೆದಾಟು ಯೋಜನೆ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂದು ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಇದು ಒಕ್ಕೂಟ ವ್ಯವಸ್ಥೆ ಮತ್ತು ಕಾನೂನಿಗೆ ವಿರುದ್ಧವಾಗಿದೆ' ಎಂದು ಟೀಕಿಸಿದರು.

`ದೇಶದಲ್ಲಿ ಖ್ಯಾತಿ ಗಳಿಸಿರುವ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾಗಿರುವ ಬೆಂಗಳೂರು ನಗರದಲ್ಲಿ ದೇಶ-ವಿದೇಶಗಳ ಹಾಗೂ ಹಲವು ರಾಜ್ಯಗಳ ಜನರು ವಾಸ ಮಾಡುತ್ತಿದ್ದು, ಅವರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ 4.5 ಟಿಎಂಸಿ ನೀರನ್ನ ಬೆಂಗಳೂರಿಗೆ ತರಲು ಮೇಕೆದಾಟು ಯೋಜನೆ ರೂಪಿಸಲಾಗಿದೆ. ಆದರೆ, ಕುಡಿಯುವ ನೀರಿನ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ' ಎಂದು ಕಾರಜೋಳ ಪ್ರಶ್ನಿಸಿದರು.

`ಈಗಾಗಲೇ ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡಿಗೆ ನೀರನ್ನು ಕೊಡುತ್ತಿದ್ದೇವೆ. ಅವರ ಪಾಲಿನ ಒಂದು ಹನಿ ನೀರನ್ನೂ ನಾವು ಬಳಕೆ ಮಾಡಿಕೊಂಡಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡು ಎಲ್ಲದಕ್ಕೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವೆ' ಎಂದು ಅವರು ವಿವರಿಸಿದರು.

`ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸ್ಪಷ್ಟ ಅಭಿಪ್ರಾಯವನ್ನು ಕೇಂದ್ರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದಿದ್ದೇವೆ. ಜೂ.17ಕ್ಕೆ ಸಭೆ ನಡೆಯಬೇಕಿತ್ತು. ಆದರೆ, ಪ್ರಧಾನಿ ಮೋದಿಯವರ ಪ್ರವಾಸದ ಹಿನ್ನೆಲೆಯಲ್ಲಿ ಜೂ.23ಕ್ಕೆ ಸಭೆ ನಿಗದಿಯಾಗುವ ಸಾಧ್ಯತೆಗಳಿವೆ. ಉದ್ದೇಶಿತ ಯೋಜನೆಗೆ ಒಪ್ಪಿಗೆ ದೊರೆಯುವ ಸಾಧ್ಯತೆಗಳಿವೆ' ಎಂದು ಅವರು ನುಡಿದರು.

`ದೇಶದಲ್ಲಿ 50 ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರಿಂದ ನಾವೇನು ಪಾಠ ಕಲಿಯುವ ಅಗತ್ಯವಿಲ್ಲ. ಒಂದು ವೇಳೆ ಅವರ ಸಲಹೆ ಬೇಕು ಎಂದರೆ ಪಡೆಯುತ್ತೇವೆ. ಅಗತ್ಯವಿದ್ದರೆ ಅವರನ್ನೂ ಕರೆದು ಮಾತನಾಡಿದ್ದೇವೆ. ನಾಳೆ ಅಥವಾ ನಾಡಿದ್ದು ನಾನು ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಮೇಕೆದಾಟು, ಭದ್ರ ಮೇಲ್ದಂಡೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದ ಇಲಾಖೆಗಳೊಂದಿಗೆ ಚರ್ಚಿಸುವೆ' ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News