BSP ವಿಪ್ ಉಲ್ಲಂಘಿಸಿ BJP ಬೆಂಬಲಿಸಿದ್ದ ಕೊಳ್ಳೇಗಾಲ ನಗರಸಭೆಯ 7 ಮಂದಿ ಸದಸ್ಯರ ಮೇಲ್ಮನವಿ ಹೈಕೋರ್ಟ್ ನಿಂದ ವಜಾ

Update: 2022-06-14 16:20 GMT

ಚಾಮರಾಜನಗರ: ಬಹುಜನ ಸಮಾಜವಾದಿ ಪಕ್ಷದ (BSP) ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಕಾರಣಕ್ಕಾಗಿ ಅನರ್ಹಗೊಂಡ ಕೊಳ್ಳೇಗಾಲ ನಗರಸಭೆಯ ಏಳು ಮಂದಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಹೈಕೋರ್ಟ್​​ನಲ್ಲಿ ವಜಾಗೊಂಡಿದೆ. ತಮ್ಮನ್ನು ನಗರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೊಳ್ಳೇಗಾಲ ನಗರಸಭೆ ಸದಸ್ಯರಾಗಿದ್ದ ಪವಿತ್ರಾ ಹಾಗೂ ಇತರ ಆರು ಮಂದಿ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿತ್ತು.

ಆದರೆ, ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ ವಿಭಾಗೀಯ ಪೀಠವು ಮೇಲ್ಮನವಿ ವಜಾಗೊಳಿಸಿ, ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ.

ಇದನ್ನೂ ಓದಿ... ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ಸೇರಿದಂತೆ 7ಮಂದಿ ಬಿಎಸ್ ಪಿ ಸದಸ್ಯರ ಸದಸ್ಯತ್ವ ರದ್ದು

ಬಿಎಸ್​ಪಿಯಿಂದ ಶಾಸಕ ಎನ್.ಮಹೇಶ್ ಉಚ್ಚಾಟನೆಗೊಂಡ ಬಳಿಕ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ 'ಆನೆ' ಗುರುತಿನಿಂದ ಗೆದ್ದಿದ್ದ 9 ಸದಸ್ಯರಲ್ಲಿ ಏಳು ಮಂದಿ ಸದಸ್ಯರು ಶಾಸಕ ಮಹೇಶ್ ಬಣ ಸೇರಿಕೊಂಡಿದ್ದರು. ಬಳಿಕ 2020ರ ಅ.29ರಂದು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಎಸ್​ಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು.

ಜಿಲ್ಲಾಧಿಕಾರಿಯ ಈ ಆದೇಶದಿಂದ ನಗರಸಭೆ ಸದಸ್ಯಸ್ಥಾನ ಕಳೆದುಕೊಂಡ ಗಂಗಮ್ಮ, ನಾಗಮಣಿ, ನಾಗಸುಂದ್ರಮ್ಮ, ಪ್ರಕಾಶ್, ರಾಮಕೃಷ್ಣ, ನಾಸಿರ್ ಷರೀಫ್ ಹಾಗೂ ಪವಿತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್​​ನಲ್ಲಿ ಅರ್ಜಿ ವಿಚಾರಣೆ ನಡೆದು 2021ರ ಸೆ.25ರಂದು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಮೇಲ್ಮನವಿಯಲ್ಲೂ ಸೋಲುಂಟಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News