​ಕನ್ನಡದ ಕೊರಳಿಗೆ ಕುತ್ತು!

Update: 2022-06-17 03:17 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಠ್ಯ ಪರಿಷ್ಕರಣೆ ವಿವಾದ ಇದೀಗ ಕನ್ನಡದ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಬೆಳೆದು ನಿಂತಿದೆ. ವೈದಿಕರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಆರಂಭಗೊಂಡ ಪರಿಷ್ಕರಣೆ, ಇದೀಗ ಸರ್ವ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಬೌದ್ಧ ಧರ್ಮದ ಉದಯಕ್ಕೆ ವೈದಿಕ ಆಚರಣೆಗಳ ಅತಿರೇಕಗಳು ಕಾರಣ ಎನ್ನುವ ಸಾಲನ್ನು ಅಳಿಸುವ ನೆಪದಲ್ಲಿ ಇಂದು ಪಠ್ಯ ಪುಸ್ತಕದಲ್ಲಿರುವ ಸರ್ವ ಕನ್ನಡ ಅಸ್ಮಿತೆಗಳನ್ನೆಲ್ಲ ಅಳಿಸಿ ಹಾಕಿ, ಆ ಜಾಗದಲ್ಲಿ ವೈದಿಕ ಭಾವನೆಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪಗಳನ್ನು ಕನ್ನಡ ಸಾಹಿತಿಗಳು, ಲೇಖಕರು ಮಾಡುತ್ತಿದ್ದಾರೆ. ಈ ಸಂಚಿನ ವಿರುದ್ಧ ಕುವೆಂಪು ಬಾಳಿ ಬದುಕಿದ ನೆಲವಾಗಿರುವ ತೀರ್ಥಹಳ್ಳಿಯಲ್ಲಿ ನೆರೆದ ಕನ್ನಡದ ಹಿರಿಯರು, ರಾಜ್ಯ ಮಟ್ಟದ ಆಂದೋಲನವೊಂದಕ್ಕೆ ನಾಂದಿ ಹಾಡಿದ್ದಾರೆ.

ಬೌದ್ಧ ಧರ್ಮದ ಉಗಮ ಮತ್ತು ಅದರ ನಾಶಕ್ಕೆ ಕಾರಣವೇನು? ಎನ್ನುವುದು ತೀರಾ ಗುಟ್ಟಾಗಿರುವ ಸಂಗತಿಯೇನೂ ಅಲ್ಲ. ಬೌದ್ಧ ಧರ್ಮದ ಉಗಮ ಮತ್ತು ನಾಶಗಳೆರಡರಲ್ಲೂ ವೈದಿಕ ಧರ್ಮದ ಕೊಡುಗೆಯಿದೆ. ಇದು ಈಗಾಗಲೇ ಇತಿಹಾಸ ಪುಸ್ತಕಗಳಲ್ಲಿ ಅಧಿಕೃತವಾಗಿ ದಾಖಲಾಗಿದೆೆ. ಇಷ್ಟಾದ ಬಳಿಕವೂ, ಈ ಸಾಲುಗಳು ವೈದಿಕರ ಮನಸ್ಸಿಗೆ ನೋವಾಗುತ್ತದೆ ಎಂದಾದರೆ ಅದನ್ನಷ್ಟೇ ಕಿತ್ತು ಹಾಕಿ ಬಿಟ್ಟಿದ್ದರೆ ವಿವಾದ ಈ ಮಟ್ಟಿಗೆ ಮುಂದುವರಿಯುತ್ತಿರಲಿಲ್ಲವೇನೋ? ಆದರೆ ಬೆರಳು ಕೊಟ್ಟವರ ಹಸ್ತವನ್ನೇ ನುಂಗುವಂತೆ, ಇದೀಗ ಒಂದು ಸಾಲು ಕಿತ್ತು ಹಾಕಲು ಹೊರಟವರು, ಪಠ್ಯ ಪುಸ್ತಕದಲ್ಲಿರುವ ಕನ್ನಡತನವನ್ನೇ ಅಳಿಸಿ ಹಾಕಲು ಹೊರಟಿದ್ದಾರೆ. ಅದಕ್ಕಾಗಿಯೇ ಮೊತ್ತ ಮೊದಲು ಪರಿಷ್ಕರಣೆಯ ಕತ್ತರಿ ಕುವೆಂಪು ಅವರ ಕೊರಳನ್ನೇ ಸವರಿತು. ಪರಿಷ್ಕರಣೆಯ ಆರಂಭದಲ್ಲಿ ನಾರಾಯಣ ಗುರು, ಬಸವಣ್ಣ, ದಾಸ ಕವಿಗಳು, ಕುವೆಂಪು, ವಾಲ್ಮೀಕಿ ಮೊದಲಾದವರನ್ನು ಹಲವು ರೀತಿಯಲ್ಲಿ ಮೂಲೆಗುಂಪು ಮಾಡಲಾಯಿತು. ಆಗ ಈ ಪರಿಷ್ಕರಣೆ ಇಡೀ ಕನ್ನಡತನದ ಮೇಲೆ ನಡೆಯುತ್ತಿರುವ ದಾಳಿಯೆಂದು ಯಾರಿಗೂ ಅನಿಸಿರಲಿಲ್ಲ. ಬಸವಣ್ಣರ ಪಾಠದಲ್ಲಿ ತಿದ್ದುಪಡಿಯಾದಾಗ ಲಿಂಗಾಯತರು ಮಾತನಾಡಿದರು. ವಾಲ್ಮೀಕಿ ಸಮುದಾಯದವರನ್ನು ದಾರಿಗಳ್ಳರು ಎಂದು ಕರೆದಾಗ ಆ ಸಮುದಾಯವಷ್ಟೇ ಆಕ್ರೋಶ ವ್ಯಕ್ತಪಡಿಸಿತು. ಸ್ಮಾರ್ತರನ್ನು ಅಥವಾ ಶಂಕರಾಚಾರ್ಯರನ್ನು ಪರೋಕ್ಷವಾಗಿ ಕಲಬೆರಕೆ ಎಂದು ವ್ಯಂಗ್ಯವಾಡಿದಾಗ ಆ ಸಮುದಾಯವಷ್ಟೇ ಖಂಡನೆ ವ್ಯಕ್ತಪಡಿಸಿತು. ಅವೆಲ್ಲ ಪಕ್ಕಕ್ಕಿರಲಿ, ಕುವೆಂಪು ಅವರ ವ್ಯಕ್ತಿತ್ವವನ್ನು ಪಠ್ಯದಲ್ಲಿ ತಿರುಚಿದಾಗ ಅದರ ವಿರುದ್ಧ ಮೊದಲು ಆಕ್ರೋಶ ವ್ಯಕ್ತಪಡಿಸಿರುವುದು ಒಕ್ಕಲಿಗ ಸಮುದಾಯ. ಅವರು ಧ್ವನಿಯೆತ್ತಿದ ಬಳಿಕವಷ್ಟೇ ಕುವೆಂಪು ಪ್ರತಿಪಾದಿಸಿರುವ ‘ಮಾನವ ಧರ್ಮ’ದ ಜಪ ಮಾಡುತ್ತಿದ್ದ ಮಾನವ ಧರ್ಮೀಯರೆಲ್ಲ ಎಚ್ಚೆತ್ತುಕೊಂಡರು. ನಾರಾಯಣಗುರುಗಳನ್ನು ಹೊರಗಿಟ್ಟಾಗ ಬಿಲ್ಲವರು ಕೆಂಡವಾದರು. ಅಂದರೆ ಪರಿಷ್ಕರಣೆಯನ್ನು ಕೇವಲ ಬಿಡಿಬಿಡಿಯಾಗಿ ನೋಡಿದ ಕಾರಣಕ್ಕಾಗಿ ಇದು ಒಟ್ಟು ಕರ್ನಾಟಕವನ್ನೇ ಪಠ್ಯ ಪುಸ್ತಕದಿಂದ ಅಳಿಸಿ ಹಾಕುವ ಸಂಚು ಎನ್ನುವುದು ಅರ್ಥವಾಗುವುದು ತಡವಾಯಿತು. ಮೇಲಿನ ಎಲ್ಲ ಮಹನೀಯರನ್ನು ಹೊರಗಿಡುವುದೆಂದರೆ ಕನ್ನಡತನವನ್ನೇ ಹೊರಗಿಡುವುದು ಎನ್ನುವುದು ಇದೀಗ ಸಕಲ ಕನ್ನಡಿಗರಿಗೂ ಅರ್ಥವಾಗಿ ಬಿಟ್ಟಿದೆ.

ಕುವೆಂಪು ಅವರನ್ನು ಅಣಕಿಸುವ ರೂಪದಲ್ಲಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪಠ್ಯ ಪುಸ್ತಕ, ಹೆಡಗೆವಾರ್ ಎನ್ನುವ ಕನ್ನಡಿಗರಿಗೆ ಎಲ್ಲ ರೀತಿಯಲ್ಲೂ ಅನ್ಯರಾಗಿರುವ ಒಬ್ಬ ಉತ್ತರ ಭಾರತೀಯ ಹಿಂದುತ್ವವಾದಿಯನ್ನು ಹಾಡಿ ಕೊಂಡಾಡುತ್ತದೆ. ಸಾಲು ಸಾಲಾಗಿ ನಿರ್ದಿಷ್ಟ ಸಮುದಾಯದ ಲೇಖಕರ ಲೇಖನಗಳು ಪಠ್ಯದೊಳಗೆ ಸೇರಿಕೊಳ್ಳುತ್ತವೆ. ಕನ್ನಡ ರಾಜ್ಯೋತ್ಸವದ ಚಿತ್ರದ ಬದಲಿಗೆ, ಮಠವೊಂದರ ಜಾತ್ರೆಯನ್ನು ಛಾಪಿಸಲಾಗುತ್ತದೆ. ಕನ್ನಡ ಬಾವುಟದ ಬದಲಿಗೆ ಅಲ್ಲಿ ಭಗವಾಧ್ವಜವನ್ನು ಸ್ಥಾಪಿಸಲಾಗುತ್ತದೆ. ಕರ್ನಾಟಕದ ಮೇಲೆ ಉತ್ತರ ಭಾರತದ ವೈದಿಕ ಸಂಸ್ಕೃತಿಯನ್ನು ಹೇರುವ ಭಾಗವಾಗಿಯೇ ಈ ಪರಿಷ್ಕರಣೆ ನಡೆದಿದೆ ಎನ್ನುವ ಅಂಶ ಇದೀಗ ಬಟಾಬಯಲಾಗಿದ್ದು , ಕನ್ನಡಿಗರು ರಾಜ್ಯಾದ್ಯಂತ ಪಠ್ಯ ಪುಸ್ತಕದ ವಿರುದ್ಧ ಒಂದಾಗುತ್ತಿದ್ದಾರೆ. ಬುಧವಾರ ಕುವೆಂಪು ಹುಟ್ಟಿದ ನೆಲದಲ್ಲಿ ಸೇರಿದ ಅಸಂಖ್ಯ ಕನ್ನಡಾಭಿಮಾನಿಗಳು ಬೃಹತ್ ಹೋರಾಟದ ಸೂಚನೆಯನ್ನು ಈಗಾಗಲೇ ಸರಕಾರಕ್ಕೆ ನೀಡಿದ್ದಾರೆ.

 ಕುವೆಂಪು ಎಂದರೆ ಕನ್ನಡ. ಕುವೆಂಪು ಅವರು ಬೃಹತ್ ಸಾಹಿತ್ಯ ಕೃತಿಗಳ ಮೂಲಕವಷ್ಟೇ ಕನ್ನಡವನ್ನು ಬೆಳೆಸಿದ್ದಲ್ಲ, ವೈಚಾರಿಕವಾಗಿಯೂ ಕನ್ನಡಿಗರನ್ನು ಜಾಗೃತಗೊಳಿಸಿದ್ದಾರೆ. ರಾಮಾಯಣವನ್ನು ಅಪಾರವಾಗಿ ಪ್ರೀತಿಸುತ್ತಿದ್ದರೂ, ಅವರು ಅಲ್ಲಿ ಶೂದ್ರರಿಗೆ, ಶೋಷಿತರಿಗೆ ಆದ ಅನ್ಯಾಯವನ್ನು ಕಟುವಾಗಿ ಖಂಡಿಸಿದ್ದಾರೆ. ‘ಶೂದ್ರ ತಪಸ್ವಿ’ ನಾಟಕದಲ್ಲಿ ಶೂದ್ರ ಶಂಭೂಕನಿಗೆ ಅವರು ನ್ಯಾಯವನ್ನು ನೀಡುತ್ತಾರೆ. ದೇವರನ್ನು ನಂಬುತ್ತಲೇ ಎಲ್ಲ ಕಂದಾಚಾರಗಳನ್ನು ವಿರೋಧಿಸಿದವರು ಅವರು. ಪುರೋಹಿತಶಾಹಿ ವ್ಯವಸ್ಥೆಗೆ ಈ ಕಾರಣದಿಂದಲೇ ಕುವೆಂಪು ಅವರ ಮೇಲೆ ಸಿಟ್ಟಿದೆ. ಕುವೆಂಪು ಅವರ ಮೇಲೆ ನಡೆಯುತ್ತಿರುವ ದಾಳಿ ಏಕಕಾಲದಲ್ಲಿ ಕನ್ನಡದ ಮೇಲೆ ಮತ್ತು ವೈಚಾರಿಕತೆಯ ಮೇಲೆ ಎನ್ನುವ ಅರಿವು ನಮಗಿರಬೇಕು. ಕುವೆಂಪು ಬರಿ ಪದ್ಯ, ಕಾವ್ಯ ಬರೆಯುತ್ತಾ ಇದ್ದಿದ್ದರೆ ಅವರನ್ನು ಸಹಿಸುತ್ತಿದ್ದರು. ಆದರೆ ಕುವೆಂಪು ಅವರು ತನ್ನ ಬದುಕಿನುದ್ದಕ್ಕೂ ವೈದಿಕ ಧರ್ಮದೊಳಗಿರುವ ಮೇಲು ಕೀಳುಗಳ ವಿರುದ್ಧ ಬರೆದರು. ಅದರ ಸಿಟ್ಟು ಇದೀಗ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ವ್ಯಕ್ತವಾಗಿದೆ.

 ಕುವೆಂಪು ಅವರು ‘ಬೆರಳ್ಗೆ ಕೊರಳ್’ ಎನ್ನುವ ನಾಟಕವನ್ನು ಬರೆದಿದ್ದರು. ಏಕಲವ್ಯನ ಹೆಬ್ಬೆರಳನ್ನು ಕಿತ್ತುಕೊಂಡ ಪಾಪಕ್ಕಾಗಿ ದ್ರೋಣಾಚಾರ್ಯರು ತಮ್ಮ ಕೊರಳನ್ನು ಕೊಡಬೇಕಾಗಿ ಬಂತು ಎಂದು ಮಹಾಭಾರತವನ್ನು ಈ ನಾಟಕದಲ್ಲಿ ಮರು ನಿರೂಪಿಸುತ್ತಾರೆ. ಪುರಾಣಗಳನ್ನು ಕುವೆಂಪು ಮರು ನಿರೂಪಿಸುವುದರ ವಿರುದ್ಧ ಅಂದಿನ ಕತೆಗಾರ ‘ಮಾಸ್ತಿ’ ಸೇರಿದಂತೆ ಹಲವು ಹಿರಿಯ ವೈದಿಕ ಬರಹಗಾರರೇ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಹೀಗಿರುವಾಗ, ಇಂದಿನ ಆರೆಸ್ಸೆಸ್‌ನ ಕೂಸುಗಳಿಗೆ ಅದು ಸಹ್ಯವಾಗುವುದು ಸಾಧ್ಯವೇ? ಆ ಕಾರಣಕ್ಕಾಗಿಯೇ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿನಿಧಿಸಿ ತನ್ನ ಬೆರಳುಗಳಲ್ಲಿ ಲೇಖನಿಸಿದ ಕುವೆಂಪು ಅವರ ಕೊರಳನ್ನು ಆರೆಸ್ಸೆಸ್ ಪುರೋಹಿತರು ಕೇಳುತ್ತಿದ್ದಾರೆ. ಕುವೆಂಪು ಅವರ ಕೊರಳು ಕನ್ನಡದ ಕೊರಳಾಗಿದೆ. ಆ ಕೊರಳನ್ನು ಕಳೆದುಕೊಂಡರೆ ನಾವು ನಮ್ಮ ಕೊರಳನ್ನೇ ಕಳೆದುಕೊಂಡಂತೆ. ಆದುದರಿಂದ, ಕುವೆಂಪು ಕೊರಳಿಗೆ ಕೈ ಹಾಕಿರುವ ದುರುಳರ ವಿರುದ್ಧ ಸಕಲ ಕನ್ನಡಿಗರು ಒಂದಾಗಿ ತಮ್ಮ ಕೈಯೆತ್ತುವ ದಿನ ಬಂದಿದೆ. ‘ಕನ್ನಡಕ್ಕಾಗಿ ಕೈ ಎತ್ತು, ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ’ ಎಂದಿದ್ದರು ಕುವೆಂಪು. ಇದೀಗ ‘ಕುವೆಂಪು ಅವರಿಗಾಗಿ ಕೈಯೆತ್ತು...’ ಎಂದು ಸ್ವತಃ ಕನ್ನಡ ತಾಯಿಯೇ ಕೈಯೊಡ್ಡಿ ಬೇಡುತ್ತಿದ್ದಾಳೆ. ಪಠ್ಯ ಪರಿಷ್ಕರಣೆಯ ವಿರುದ್ಧದ ಈ ಹೋರಾಟದಲ್ಲಿ ಕನ್ನಡಮ್ಮನ ಹರಕೆ ನಮ್ಮೆಲ್ಲರ ಮೇಲಿದೆ ಎನ್ನುವ ನೆನಪು ನಮಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News