ಕುವೆಂಪು ವಿವಿ ಘಟಿಕೋತ್ಸವ; ಸರ್ಕಾರಿ ಶಾಲೆಯಲ್ಲಿ ಓದಿದ ದಿವ್ಯಾಗೆ 11 ಚಿನ್ನದ ಪದಕ
Update: 2022-06-16 16:17 IST
ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ಓದಿದ ದಿವ್ಯಾ 'ಕುವೆಂಪು ವಿವಿ'ಯ 32ನೇ ಘಟಿಕೋತ್ಸವದಲ್ಲಿ 11 ಸ್ವರ್ಣ ಪದಕ ಪಡೆದು ಸಾಧನೆ ಮಾಡಿದ್ದಾರೆ.
'ಮನೆಯವರ ಮತ್ತು ಗುರುಗಳ ಸಹಕಾರವೇ ನನ್ನ ಸಾಧನೆಗೆ ಕಾರಣ' ಎಂದು 32ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅತಿ ಹೆಚ್ಚು 11 ಸ್ವರ್ಣಪದಕ ಪಡೆದ ಕನ್ನಡ ಅಧ್ಯಯನ ವಿಭಾಗದ ಎಂ.ಎ. ಪದವೀಧರೆ ದಿವ್ಯಾ ಹೆಚ್.ಎನ್. 'ವಾರ್ತಾಭಾರತಿ' ಯೊಂದಿಗೆ ಅನಿಸಿಕೆ ಹಂಚಿಕೊಂಡರು.
ನಮ್ಮ ತಂದೆ ನಾಗರಾಜ್, ಅಮ್ಮ ಭವಾನಿ. ನಮ್ಮೂರು ಹಣಗೆರೆಕಟ್ಟೆ. ನನಗೆ ಇಷ್ಟೊಂದು ಪದಕಗಳು ಬರುತ್ತವೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಸಾಧನೆಗೆ ಪ್ರತಿಫಲ ಸಿಕ್ಕಿದೆ. ಮುಂದೆ ಪಿಹೆಚ್‌ಡಿ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಪೊಲೀಸ್ ಹುದ್ದೆಗೂ ಅರ್ಜಿ ಹಾಕಿದ್ದೇನೆ. ಕೆಎಎಸ್ ಮಾಡಬೇಕೆಂಬ ಬಯಕೆಯೂ ಇದೆ ಎಂದರು.
ನನ್ನ ಸಾಧನೆಗೆ ನಮ್ಮ ತಂದೆ ತಾಯಿಗಳು ಹಾಗೂ ವಿವಿಯ ಅಧ್ಯಾಪಕ ವರ್ಗದವರು ಕಾರಣರಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.