ಪತಿಯ ವಿರುದ್ಧ ಲೈಂಗಿಕ ಕ್ರಿಯೆಗೆ ಅಸಮರ್ಥನೆಂದು ಸುಳ್ಳು ಹೇಳಿದರೂ ಕ್ರೌರ್ಯ: ಹೈಕೋರ್ಟ್

Update: 2022-06-16 12:30 GMT

ಬೆಂಗಳೂರು, ಜೂ.16: ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಪತಿ ವಿರುದ್ಧ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದಾನೆ ಎಂದು ಆರೋಪ ಹೊರಿಸಿದ್ದ ಪತ್ನಿಯ ನಡೆಯನ್ನು ಆಕ್ಷೇಪಿಸಿರುವ ಹೈಕೋರ್ಟ್, ಇಂಥ ಆರೋಪವನ್ನು ಮಾನಸಿಕ ಕ್ರೌರ್ಯ ಎಂದು ವ್ಯಾಖ್ಯಾನಿಸಿದೆ. ಜತೆಗೆ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ. 

ಪತ್ನಿಯು ಬೇರೆಯವರ ಮುಂದೆ ತನ್ನನ್ನು ನಪುಂಸಕನೆಂದು ಯಾವುದೇ ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡಿದ್ದಾಳೆ. ಹೀಗಾಗಿ, ವಿಚ್ಛೇದನ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಧಾರವಾಡ ಪ್ರಧಾನ ಕೌಟುಂಬಿಕ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಧಾರವಾಡ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥರಾಗಿದ್ದಾರೆ ಎಂದು ಪತ್ನಿ ಸಾಕ್ಷ್ಯಾಧಾರಗಳು ಇಲ್ಲದೆ ಆರೋಪ ಮಾಡಿದ್ದಾರೆ. ಇಂತಹ ಆರೋಪವು ಪತಿಯ ಘನತೆಗೆ ಧಕ್ಕೆ ತಂದಂತಾಗುತ್ತದೆ. ಅಲ್ಲದೆ, ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂಬುದಾಗಿ ಆರೋಪಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಹೇಳಿದೆ. ಅಲ್ಲದೆ, ತಾನು ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಿದ್ಧವಾಗಿರುವುದಾಗಿ ಪತಿ ತಿಳಿಸಿದ್ದರು. ಪತ್ನಿ, ಪತಿಯ ನಪುಂಸಕತ್ವವನ್ನು ವೈದ್ಯಕೀಯ ದಾಖಲೆಗಳೊಂದಿಗೆ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. 

ಹಿಂದು ವಿವಾಹ ಕಾಯಿದೆ ಸೆಕ್ಷನ್ 13ರ ಅಡಿಯಲ್ಲಿ ನಪುಂಸಕತ್ವವು ವಿಚ್ಛೇದನ ಪಡೆಯಲು ಕಾರಣವಲ್ಲ ಎಂದು ಹೇಳಲಾಗಿದೆ. ಆದರೆ, ಸೆಕ್ಷನ್ 13(1)(ಐಎ) ಅಡಿಯಲ್ಲಿ ನಪುಂಸಕತ್ವದ ಕುರಿತು ಸುಳ್ಳು ಆರೋಪ ಮಾಡಿದರೆ ಮಾನಸಿಕ ಕ್ರೌರ್ಯವಾಗುತ್ತದೆ. ಈ ಅಂಶಗಳ ಮೇಲೆ ಪತಿಯು ವಿಚ್ಛೇದನ ಪಡೆಯಬಹುದು ಎಂದು ಹೈಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News