ಪರಿಷತ್ ನ 4 ಕ್ಷೇತ್ರಗಳ ಚುನಾವಣೆ ಫಲಿತಾಂಶ; ಬಿಜೆಪಿ -2, ಕಾಂಗ್ರೆಸ್ -2, ಜೆಡಿಎಸ್ ಶೂನ್ಯ

Update: 2022-06-16 15:46 GMT

ಬೆಂಗಳೂರು, ಜೂ.16:  ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ.13ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತಲಾ ಎರಡು ಸ್ಥಾನಗಳಲ್ಲಿ ಗೆಲುವು ಕಂಡಿದ್ದು,  ಜೆಡಿಎಸ್‌ ಪಕ್ಷ ಶೂನ್ಯಕ್ಕೆ ಕುಸಿದಿದೆ.  

ವಾಯವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಜಯಭೇರಿ ಭಾರಿಸಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 65,922 ಮತಗಳು ಚಲಾವಣೆಗೊಂಡಿದ್ದು, 9,006 ಮತಗಳು ಅಸಿಂಧುವಾಗಿದ್ದವು. ಸಿಂಧುವಾಗಿದ್ದ 56,916 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ 44,815 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಅವರು 10,122 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಹನುಮಂತ ನಿರಾಣಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸುನೀಲ್ ಸಂಕ ಅವರನ್ನು 34,693 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಅದೇ ರೀತಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದು ಬಿಂಬಿಸಲ್ಪಡುತ್ತಿದ್ದ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ-46,082 ಮತಗಳು ಗಳಿಸಿದರೆ ಬಿಜೆಪಿ ಅಭ್ಯರ್ಥಿ ಎಂ.ವಿ.ರವಿ ಶಂಕರ್ 33,878 ಮತಗಳನ್ನು ಪಡೆದರು. ಆ ಮೂಲಕ ಮಧು ಜಿ.ಮಾದೇಗೌಡ ತಮ್ಮ ಸಮೀಪದ ಪ್ರತಿಸ್ಪರ್ಧಿ ರವಿಶಂಕರ್ ಅವರನ್ನು 12,204 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಇನ್ನುಳಿದಂತೆ, ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು-19,630, ಪಕ್ಷೇತರ ಸದಸ್ಯರಾದ ಪ್ರಸನ್ನ ಎನ್.ಗೌಡ-7,587, ಎನ್.ಎಸ್.ವಿನಯ್-3,864, ಡಾ.ಬಿ.ಎಚ್.ಚನ್ನಕೇಶವಮೂರ್ತಿ-2,836, ಎಸ್‍ಡಿಪಿಐ ಅಭ್ಯರ್ಥಿ ರಫತುಲ್ಲಾ ಖಾನ್-788, ವಾಟಾಳ್ ನಾಗರಾಜ್-516 ಮತಗಳನ್ನು ಪಡೆದುಕೊಂಡಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ನಿನ್ನೆ (ಬುಧವಾರ) ಆರಂಭವಾದ ಮತ ಎಣಿಕೆ ಗುರುವಾರ ಮಧ್ಯಾಹ್ನ ಮುಕ್ತಾಯವಾಯಿತು. ವಾಯವ್ಯ ಪದವೀಧರ ಮತ ಎಣಿಕೆ ಕಾರ್ಯವು ಬುಧವಾರ ತಡರಾತ್ರಿ ವೇಳೆ ಮುಕ್ತಾಯಗೊಂಡಿತ್ತು. 

ಬೆಂಬಲಿಗರೊಂದಿಗೆ ದಕ್ಷಿಣ ಪದವೀಧರ ಕ್ಷೇತ್ರದ ವಿಜೇತ ಕಾಂಗ್ರಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ

ವಾಯವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ


ಪಶ್ಚಿಮ, ವಾಯವ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ:

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಅವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ತೊರೆದು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಎಂಟನೇ ಬಾರಿ ವಿಜಯ ಸಾಧಿಸಿ ದಾಖಲೆ ಬರೆದಿದ್ದಾರೆ.

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಜಯ ಗಳಿಸಿದ್ದಾರೆ. ಈ ಹಿಂದೆ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಅರುಣ್ ಶಹಾಪುರ ಸೋಲನುಭವಿಸಿದ್ದಾರೆ. ಈ ಎರಡೂ ಕ್ಷೇತ್ರಗಳ ಮತ ಎಣಿಕೆ ಬುಧವಾರ ಮುಕ್ತಾಯಗೊಂಡಿತ್ತು. 

ಚುನಾವಣಾಧಿಕಾರಿಯಿಂದ  ಪ್ರಮಾಣ ಪತ್ರ ಸ್ವೀಕರಿಸುತ್ತರುವ ಬಿಜೆಪಿಯ ವಿಜೇತ ಅಭ್ಯರ್ಥಿ ಬಸವರಾಜ ಹೊರಟ್ಟಿ

ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌  ವಿಜೇತ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ


2023ರ ಚುನಾವಣೆಗೆ ದಿಕ್ಸೂಚಿ: ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಮಧು ಜಿ.ಮಾದೇಗೌಡ ಜಯಗಳಿಸಿದ್ದಕ್ಕೆ ಅವರಿಗೆ ಮೊದಲಿಗೆ ಅಭಿನಂದನೆಯನ್ನು ಹೇಳಬಯಸುತ್ತೇನೆ. 2023ರ ವಿಧಾನಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಿದ್ದು, ಸುಶಿಕ್ಷಿತ ವರ್ಗವಾದ ಪದವೀಧರರು ಕಾಂಗ್ರೆಸ್ ಅನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಕಳೆದ 40 ವರ್ಷಗಳಿಂದ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ನಮ್ಮ ಪಕ್ಷದ ಪರ ನಿಂತಿದ್ದು, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನದಲ್ಲಿ ಅಭೂತಪೂರ್ವ ಮುನ್ನಡೆಯನ್ನು ಕೊಟ್ಟಿದ್ದಾರೆ. ಇದಕ್ಕಾಗಿ ಮತದಾರರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಜೊತೆಗೆ ಜೆಡಿಎಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದು, ಹಾಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಸುಶಿಕ್ಷಿತ ಮತದಾರರು ಕೈ ಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ. 

ಮಧು ಜಿ. ಮಾದೇಗೌಡರ ಗೆಲುವಿನ ಬಗ್ಗೆ ನಾನು ಈ ಮೊದಲೇ ಹೇಳಿಕೆ ನೀಡಿದ್ದೆ. ಅದೀಗ ಫಲಿತಾಂಶದ ಮೂಲಕ ಹೊರಹೊಮ್ಮಿದೆ. ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಲ್ಲಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಧು ಮಾದೇಗೌಡರು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆಂಬ ವಿಶ್ವಾಸ ನನಗಿದೆ. ಪದವೀಧರರ ಹಲವು ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‍ನಲ್ಲಿ ಮಧು ಮಾದೇಗೌಡರು ಧ್ವನಿ ಎತ್ತಲಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇನ್ನು ಹೊಸ ಶಕೆ ಪ್ರಾರಂಬವಾಗಲಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. 

‘ಬೆಳಗಾವಿ ಶಿಕ್ಷಕರು, ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರದ ಪದವೀಧರರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದರು. ಇಂದು ಶಿಕ್ಷಕರು ಹಾಗೂ ಪದವೀಧರರು 4 ಕ್ಷೇತ್ರಗಳ ಪೈಕಿ 2ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಎಲ್ಲ ಪ್ರಜ್ಞಾವಂತ ಮತದಾರರು ರಾಜ್ಯಕ್ಕೆ ಮುಂದಿನ ಭವಿಷ್ಯ ಕಾಂಗ್ರೆಸ್ ಎಂದು ತೋರಿಸಿದ್ದಾರೆ. ಮತ ಕೊಟ್ಟ ಎಲ್ಲರಿಗೂ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ತಮ್ಮ ಸಹೋದರ ಹಣಮಂತ ನಿರಾಣಿ ದಾಖಲೆಯ 34,693 ಮತಗಳ ಅಂತರದಿಂದ ಗೆಲ್ಲಲು ಕಾರಣೀಭೂತರಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ.

-ಮುರುಗೇಶ್ ನಿರಾಣಿ, ಕೈಗಾರಿಕೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News