×
Ad

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಕ್ಕೆ ಮತದಾರರಿಗೆ ಧನ್ಯವಾದ ಹೇಳಿದ ಜೆಡಿಎಸ್ ಪರಿಷತ್ ಸದಸ್ಯ ಮರಿತಿಬ್ಬೇಗೌಡ

Update: 2022-06-16 20:00 IST
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ

ಮೈಸೂರು,ಜೂ.16: ವಿಧಾನಪಪರಿಷತ್‍ನ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಸೋಲಲ್ಲ, ಪಕ್ಷದ ವರಿಷ್ಠರ ಸೋಲು, ಈ ಸೋಲಿಗೆ ಪಕ್ಷದ ನಾಯಕರೇ ಹೊಣೆ ಎಂದು ಎಂದು ಹೇಳುವ ಮೂಲಕ ಜೆಡಿಎಸ್ ನ  ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಮ್ಮ ಪಕ್ಷದ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. 

ದಕ್ಷಿಣ ಪದವೀಧರ ಚುನಾವಣೆ ಫಲಿತಾಂಶದ ನಂತರ ಗುರುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮರಿತಿಬ್ಬೇಗೌಡ ಮಾತನಾಡಿ, ಈ ಚುನಾವಣೆಯಲ್ಲಿ ಮತದಾರರು ದಕ್ಷಿಣ ಪದವೀಧರ ಕ್ಷೇತ್ರದ ಪಾವಿತ್ರ್ಯತೆ, ನೈತಿಕತೆಯನ್ನು ನಾಡಿಗೆ ತೋರಿಸಿದ್ದಾರೆ. ಪ್ರಬುದ್ಧತೆಯಿಂದ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿ ಸರ್ಕಾರದ ವಿರುದ್ಧ ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲದೇ ಶ್ರೀಮಂತ ಹಾಗೂ ಕ್ಷೇತ್ರಕ್ಕೆ ಸಂಬಂಧವಿಲ್ಲದ ಜೆಡಿಎಸ್ ಅಭ್ಯರ್ಥಿಯನ್ನು ಮತದಾರರು ತಿರಸ್ಕಾರ ಮಾಡಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

'ಜೆಡಿಎಸ್ ಸೋಲಿಗೆ ಪ್ರಮುಖ ಕಾರಣ ಪಕ್ಷಕ್ಕೆ ಸಂಬಂಧವಿಲ್ಲದ ರಾಮು ಅವರಿಗೆ ಟಿಕೆಟ್ ನೀಡಿದ್ದು. ವರಿಷ್ಠರು ಇದನ್ನು ಸರಿ ಪಡಿಸಿಕೊಳ್ಳಬೇಕು, ಅದು ಜೆಡಿಎಸ್ ವರಿಷ್ಠರಿಗೆ ಬಿಟ್ಟ ವಿಚಾರ. ಜೆಡಿಎಸ್ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದು ರಾಮು ಸೋಲಲ್ಲ ಪಕ್ಷದ ವರಿಷ್ಠರ ಸೋಲು, ಈ ಸೋಲಿಗೆ ಪಕ್ಷದ ನಾಯಕರೇ ಹೊಣೆ' ಎಂದು ತಿಳಿಸಿದರು.

'ಸದ್ಯ ನಾನು ಜೆಡಿಎಸ್ ಪಕ್ಷದಲ್ಲಿದ್ದೇನೆ, ಮುಂದಿನ ದಿನಗಳಲ್ಲಿ ನನ್ನ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಮುಂದಿನ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದಿಲ್ಲ. ಚುನಾವಣೆ ವಿಚಾರದಲ್ಲಿ ದೇವೇಗೌಡರು ಅಸಹಾಯಕರಾಗಿದ್ದಾರೆ. ಕೆಲವೊಮ್ಮೆ ನ್ಯಾಯ ಕೊಡಿಸಿದ್ದಾರೆ, ಕೆಲವೊಮ್ಮೆ ನ್ಯಾಯ ಕೊಡಿಸಿಲ್ಲ. ಕೀಲಾರ ಜಯರಾಂ ವಿಚಾರದಲ್ಲಿ ನ್ಯಾಯ ಕೊಡಿಸಿಲ್ಲ. ದೇವೇಗೌಡರು ಕೀಲಾರ ಜಯರಾಂ ಬಗ್ಗೆ ಸಾಕಷ್ಟು ಪ್ರೀತಿ ವಿಶ್ವಾಸ ಇಟ್ಟು ಕೊಂಡಿದ್ದಾರೆ. ಆದರೆ ಅದು ಪ್ರಯೋಜನವಾಗಿಲ್ಲ. ಈ ರೀತಿ ಆದರೆ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳೊದು ಹೇಗೆ. ಪಕ್ಷದ ವರಿಷ್ಟರು ಯಾವಾಗ ಕರೆದರು ನಾನು ಮಾತನಾಡಲು ಸಿದ್ದ. ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಮರಿತಿಬ್ಬೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News