ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ: ಸಚಿವ ಶಿವರಾಮ್ ಹೆಬ್ಬಾರ್

Update: 2022-06-16 15:05 GMT

ಬೆಂಗಳೂರು, ಜೂ.16: ನಾಡಿನ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬಾರದು ಎಂಬ ಸದುದ್ದೇಶದಿಂದ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ ನೀಡಲಾಗುವುದು, ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಕಾರ್ಮಿಕ ಕಲ್ಯಾಣ ಮಂಡಳಿಯೆ ಭರಿಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.

ಗುರುವಾರ ನಗರದಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸಭಾಂಗಣದಲ್ಲಿ ಮಂಡಳಿಯ ಸಭೆಯನ್ನು ನಡೆಸಿ, ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿವಿಧ ಯೋಜನೆಗಳನ್ನು ಅವರು ಘೋಷಿಸಿದರು.

ಈ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ರಾಜ್ಯದ 2,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ ಶೈಕ್ಷಣಿಕ ಪ್ರೋತ್ಸಾಹ ಧನದ ಜೊತೆಯಲ್ಲಿ 10 ಸಾವಿರ ರೂಪಾಯಿ ವಿಶೇಷ ಪ್ರೋತ್ಸಾಹ ಧನ ಮತ್ತು ಅಭಿನಂದನಾ ಪತ್ರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಪಿ.ಗುರುಪ್ರಸಾದ್, ಮಂಡಳಿಯ ಕಾರ್ಯದರ್ಶಿ ಮನೋಜ್ ಜೈನ್ ಹಾಗೂ ಮಂಡಳಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News