ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ: ಆರೋಪಿ ಬಂಧನ

Update: 2022-06-16 15:29 GMT

ಚಿಕ್ಕಮಗಳೂರು, ಜೂ.16: ಎಂಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಹಲವು ವ್ತಕ್ತಿಗಳ ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡು ರಾಜ್ಯದ ತೇನಿ ಜಿಲ್ಲೆಯ ತಂಬಿರಾಜು ಬಂಧಿತ ಆರೋಪಿಯಾಗಿದ್ದು, ಈತ ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಕಾಫಿಬೆಳೆಗಾರ ಉದಯಕುಮಾರ್ ಎಂಬವರಿಗೆ ಕರ್ನಾಟಕ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್‍ನ್ನು ಬದಲಾಯಿಸಿಕೊಂಡು ಹೋಗಿದ್ದ. ಹೀಗೆ ಬದಲಾಯಿಸಿದ ಎಟಿಎಂ ಕಾರ್ಡ್ ಬಳಸಿ ಚಿಕ್ಕಮಗಳೂರು ನಗರದಲ್ಲಿ 25ಸಾವಿರ ರೂ. ಡ್ರಾ ಮಾಡಿಕೊಂಡು ಜ್ಯೂವೆಲರಿ ಶಾಪ್ ವೊಂದರಲ್ಲಿ 75ಸಾವಿರ ರೂ. ಸ್ವೈಪ್ ಮಾಡಿ ಚಿನ್ನ ಖರೀದಿಸಿದ್ದ. ಈ ಸಂಬಂಧ ಉದಯಕುಮಾರ್ ಅವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಆರೋಪಿಯ ಬಂಧನಕ್ಕಾಗಿ ಉಪ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆದರ್ಶ, ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಧನಂಜಯ್, ಸಿಬ್ಬಂದಿ ಗಿರೀಶ್, ಲೋಹಿತ್, ವಸಂತಕುಮಾರ್, ಲೋಕೇಶ್, ಸುನೀಲ್, ಪ್ರದೀಪ್, ಉಮೇಶ್ ಒಳಗೊಂಡ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು.

ಕಾರ್ಯಾಪ್ರವೃತ್ತವಾದ ಈ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಮಡಿಕೇರಿಯಲ್ಲಿ ಆರೋಪಿ ತಂಬಿರಾಜುನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಹಾಗೂ ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಎಟಿಎಂ ಕಾರ್ಡ್ ಬಳಸಿ ವಂಚನೆ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದೆ.

ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಹಾಗೂ ಜ್ಯೂವೆಲ್ಲರಿ ಶಾಪ್‍ಗಳಲ್ಲಿ ಕಾರ್ಡ್ ಸ್ವೈಪ್ ಮಾಡಿ ಚಿನ್ನವನ್ನು ಖರೀದಿಸುತ್ತಿದ್ದುದನ್ನು ತನಿಖೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಈತನ ಮೇಲೆ ತಮಿಳುನಾಡಿನಲ್ಲಿ 11 ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಬಂಧಿತ ಆರೋಪಿಯಿಂದ 70 ವಿವಿಧ ಬ್ಯಾಂಕ್‍ಗಳ ಎಟಿಎಂ ಕಾರ್ಡ್, 60 ಗ್ರಾಂ. ಚಿನ್ನ, 35ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದು. ತನಿಖೆ ಮುಂದೂವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News