×
Ad

ಚಿಕ್ಕಮಗಳೂರು: ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ ಅಮುದಾಗೆ ಉನ್ನತ ಶಿಕ್ಷಣಕ್ಕೆ ಅಡ್ಡಿಯಾದ ಬಡತನ

Update: 2022-06-16 22:32 IST

ಚಿಕ್ಕಮಗಳೂರು, ಜೂ.16: ಪತ್ರಿಕೋದ್ಯಮ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಕಾಲೇಜು ಯುವತಿಯೊಬ್ಬಳು ಆರ್ಥಿಕ ಸಮಸ್ಯೆಯಿಂದಾಗಿ ವ್ಯಾಸಂಗ ಮೊಟಕುಗೊಳಿಸಿ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿದ ಘಟನೆ ಕಾಫಿನಾಡಿನಲ್ಲಿ ವರದಿಯಾಗಿದೆ.

ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಮರಸಣಿಗೆ ಗ್ರಾಪಂ ವ್ಯಾಪ್ತಿಯ ಉದಯ್‌ಕುಮಾರ್, ಮಹಾಲಕ್ಷ್ಮೀ ದಂಪತಿ ಪುತ್ರಿ ಹಾಗೂ ಕಳಸ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಅಮುದಾ ರ್‍ಯಾಂಕ್ ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ವ್ಯಾಸಂಗ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾರೆ. ಮರಸಣಿಗೆ ಗ್ರಾಮದ ಕಾಫಿ ಎಸ್ಟೇಟ್‌ವೊಂದರಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ಜೀವನ ನಡೆಸುತ್ತಿರುವ ಉದಯ್‌ಕುಮಾರ್, ಮಹಾಲಕ್ಷ್ಮೀ ದಂಪತಿಗೆ ಸ್ವಂತ ವಾಸದ ಮನೆ ಇಲ್ಲವಾಗಿದ್ದು, ಎಸ್ಟೇಟ್‌ನ ಕೂಲಿ ಕಾರ್ಮಿಕರ ಲೈನ್ ಮನೆಯಲ್ಲೇ ವಾಸವಿದ್ದಾರೆ. ಕಡುಬತನದ ಮಧ್ಯೆಯೂ ಈ ದಂಪತಿ ತಮ್ಮ ಮೂವರು ಮಕ್ಕಳ ಪೈಕಿ ಕಿರಿಯವಳಾದ ಅಮುದಾ ತನ್ನ ಮನೆಯಿಂದ 8 ಕಿ.ಮೀ. ನಡೆದು ಬಂದು ಮರಸಣಿಗೆ ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದರು. ಅಮುದಾ ಸಹೋದರರಿಬ್ಬರು ವಿದ್ಯಾಭ್ಯಾಸ ಮೊಟಕುಗೊಳಿಸಿ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಂದೆಡೆ ಬಡತನ ಇದ್ದರೂ ತಂದೆ, ತಾಯಿ, ಸಹೋದರರ ಸಹಕಾರದಿಂದ ಕಳಸ ಪಟ್ಟಣದಲ್ಲಿ ಪ್ರೌಢ, ಪದವಿ ಪೂರ್ವ ಶಿಕ್ಷಣ ಪಡೆದ ಅಮುದಾ ಅಲ್ಲಿಯೇ ಸರಕಾರಿ ಪ್ರಥಮ ದರ್ಜೆ ಸರಕಾರಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಶಿಕ್ಷಣ ಮುಂದುವರಿಸಿದ್ದಳು. ಅಮುದಾಳ ಕುಟುಂಬ ವಾಸವಿದ್ದ ಎಸ್ಟೇಟ್‌ನಿಂದ 8 ಕಿ.ಮೀ. ಪ್ರತಿದಿನ ನಡೆದುಕೊಂಡು ಮರಸಣಿಗೆ ಗ್ರಾಮಕ್ಕೆ ಬರುತ್ತಿದ್ದ ಅಮುದಾ ಅಲ್ಲಿಂದ ಖಾಸಗಿ ಬಸ್ ಮೂಲಕ 5 ಕಿ.ಮೀ. ಪ್ರಯಾಣಿಸಿ ಕಳಸ ಪಟ್ಟಣದ ಕಾಲೇಜಿಗೆ ತೆರಳಬೇಕಿತ್ತು. ಆದರೂ ಅಂತಿಮ ವರ್ಷದ ಪತ್ರಿಕೋದ್ಯಮ ವಿಭಾಗದಲ್ಲಿ ಅಮುದಾ ಮೊದಲ ರ್ಯಾಂಕ್ ಪಡೆಯುವ ಮೂಲಕ ಚಿನ್ನದ ಪದಕ ಗಳಿಸಿ ಕಡುಬಡತನ ಇದ್ದರೂ ಇದು ಸಾಧನೆಗೆ ಅಡ್ಡಿಯಾಗಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದರು.

ಕಡು ಬಡತನ ಇದ್ದ ಪರಿಣಾಮ ಪದವಿ ಶಿಕ್ಷಣದ ಬಳಿಕ ಮುಂದಿನ ವ್ಯಾಸಂಗ ಮುಂದುವರಿಸಲು ಆರ್ಥಿಕ ಸಮಸ್ಯೆ, ಮಗಳ ಓದಿಗಾಗಿ ಎಸ್ಟೇಟ್ ಮಾಲಕರ ಬಳಿ ಮಾಡಿದ್ದ ಸಾಲ, ತಾಯಿಯ ಅನಾರೋಗ್ಯದಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಮುದಾ ಅವರು ಬೆಂಗಳೂರಿನಲ್ಲಿದ್ದ ಸಹೋದರರ ಸಹಕಾರದಿಂದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಮೂಲಕ ಚಿನ್ನದ ಪದಕ ಪಡೆದ ಕುಗ್ರಾಮದ, ಕಡುಬಡತನದಲ್ಲೂ ಸಾಧನೆ ಮಾಡಿದ್ದ, ಉನ್ನತ ಶಿಕ್ಷಣದ ಕನಸು ಕಂಡಿದ್ದ ಪ್ರತಿಭೆಯ ಶೈಕ್ಷಣಿಕ ಬದುಕು ಅತಂತ್ರಗೊಂಡಂತಾಗಿದೆ.

ಗುರುವಾರ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಪದವಿ ಪ್ರದಾನ ಘಟಿಕೋತ್ಸವ ನಡೆದಿದ್ದು, ಈ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ  ರ್‍ಯಾಂಕ್ ಪಡೆದಿರುವ ಅಮುದಾಳಿಗೆ ವಿವಿ ವತಿಯಿಂದ ಸ್ವರ್ಣ ಪದಕ ನೀಡಿ ಗೌರವಿಸಿದೆ. ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯುವ ಉದ್ದೇಶದಿಂದ ಅಮುದಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬುಧವಾರ ಆಗಮಿಸಿದ್ದು, ಮತ್ತೆ ಗಾರ್ಮೆಂಟ್ಸ್ ಕೆಲಸಕ್ಕೆಂದು ಬೆಂಗಳೂರಿಗೆ ಹಿಂದಿರುಗಿದ್ದಾಳೆ.

ಸಾಲ ತೀರಿಸಲು ಗಾರ್ಮೆಂಟ್ ಕೆಲಸಕ್ಕೆ

ಪದವಿಯಲ್ಲಿ ನನಗೆ ಸ್ವರ್ಣ ಪದಕ ಬಂದಿರುವುದು ಖುಷಿಯಾಗಿದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ನನ್ನ ಶಿಕ್ಷಣಕ್ಕಾಗಿ ಸಾಕಷ್ಟು ಸಾಲ ಮಾಡಿದ ಅಪ್ಪ-ಅಮ್ಮನ ಪರಿಸ್ಥಿತಿಯನ್ನು ನೋಡಿ ಸಾಲ ತೀರಿಸಲು ಬೆಂಗಳೂರಿನಲ್ಲಿ ಗಾರ್ಮೆಂಟ್ ಕೆಲಸಕ್ಕೆ ಸೇರಿದ್ದೇನೆ. ನನ್ನ ಸಹಪಾಠಿಗಳು ಉನ್ನತ ಶಿಕ್ಷಣಕ್ಕೆ ಸೇರಿದ್ದಾರೆ. ನನಗೆ ಶಿಕ್ಷಣ ಮುಂದುವರಿಸುವ ಆಸೆ ಇದೆಯಾದರೂ ಹಣಕಾಸಿನ ಸಮಸ್ಯೆ ಇದೆ. ನನ್ನ ಶಿಕ್ಷಣಕ್ಕೆ ಮಾಡಿದ ಸಾಲ ತೀರಿಸುವ ಉದ್ದೇಶದಿಂದ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿದ್ದೇನೆ. ಪತ್ರಿಕೋದ್ಯಮದಲ್ಲಿ ರ್‍ಯಾಂಕ್ ಬಂದ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಕೆಲಸ ನೀಡುವುದಾಗಿ ತಿಳಿಸಿದೆ. ಸಂದರ್ಶನ ಮುಗಿಸಿದ್ದು, ಸಂಸ್ಥೆಯವರು ಕರೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿ ಕೆಲಸ ಸಿಕ್ಕಿದರೆ ಅಲ್ಲೇ ಕೆಲಸ ಮಾಡಿ ನನ್ನ ಕುಟುಂಬದ ಸಾಲ ತೀರಿಸುತ್ತೇನೆ ಎಂದು ಗುರುವಾರ ಶಿವಮೊಗ್ಗದಲ್ಲಿ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಸ್ವರ್ಣ ಪದಕ ಪಡೆದು ಹಿಂದಿರುಗುತ್ತಿದ್ದ ವೇಳೆ ಮೊಬೈಲ್ ಕರೆ ಮೂಲಕ ಅಮುದಾ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News