×
Ad

ಬೀದರ್ | ದಲಿತ ಸಹಾಯಕಿ ತಯಾರಿಸಿದ ಆಹಾರಕ್ಕೆ ವಿರೋಧ: 'ಮೇಲ್ಜಾತಿ'ಯವರ ಮಕ್ಕಳಿಂದ ಅಂಗನವಾಡಿ ಬಹಿಷ್ಕಾರ

Update: 2022-06-17 11:52 IST

ಬೀದರ್, ಜೂ.17: ಜಿಲ್ಲೆಯ ಹಾರ್ಕೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ಯಾಳ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ದಲಿತ ಸಮುದಾಯಕ್ಕೆ ಸೇರಿದ್ದಾರೆಂಬ ಕಾರಣ ಗ್ರಾಮದ ಮೇಲ್ಜಾತಿಯವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮಾಲೋಚನೆ ಬಳಿಕವೂ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವುದು ಗ್ರಾಮದ ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರಚಂಚಕ್ಕೆ ಸಾಮರಸ್ಯ ಸಾರಿದ ‘ಶರಣರ ಪುಣ್ಯಭೂಮಿ' ಬಸವ ಕಲ್ಯಾಣ ತಾಲೂಕಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಹಾಯಕಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದ ಕಾರಣ 6 ತಿಂಗಳು ಕಾಲ ಬೀಗ ಜಡಿಯಲಾಗಿತ್ತು. ಇದೀಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದ್ದರೂ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ.

ಬೀದರ್ ಜಿಲ್ಲೆಯ ಹತ್ಯಾಳ ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ವಾಸಿಸುತ್ತಿದ್ದ ಜಿಲ್ಲಾ ಕೇಂದ್ರದಿಂದ 90 ಕಿ.ಮೀ ಹಾಗೂ ಬಸವ ಕಲ್ಯಾಣ ತಾಲೂಕು ಕೇಂದ್ರದಿಂದ 20 ಕಿಮೀ ದೂರದಲ್ಲಿದ್ದು, ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ ಹಾಗೂ ಪರಿಶಿಷ್ಟ ಜಾತಿ(ಎಸ್ಸಿ)ಯವರು ಇದ್ದಾರೆ. ಹತ್ಯಾಳ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ.

ಒಂದು ಅಂಗನವಾಡಿ ದಲಿತ ಕಾಲನಿಯಲ್ಲಿದ್ದರೆ ಮತ್ತೊಂದು ‘ಸಾಮಾನ್ಯ' ವರ್ಗದವರ ಪ್ರದೇಶದಲ್ಲಿದೆ. ದಲಿತ ಕಾಲನಿಯಲ್ಲಿರುವ ಅಂಗನವಾಡಿಗೆ ಯಾವುದೇ ಸಮಸ್ಯೆಯಿಲ್ಲ, ಇಲ್ಲಿನ ಶಿಕ್ಷಕಿ, ಸಹಾಯಕಿ ಹಾಗೂ ಮಕ್ಕಳೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಸಾಮಾನ್ಯ ವರ್ಗದವರಿರುವ ಪ್ರದೇಶದಲ್ಲಿನ ಅಂಗನವಾಡಿಗೆ 9 ತಿಂಗಳ ಹಿಂದೆ ದಲಿತ ಸಮುದಾಯಕ್ಕೆ ಸೇರಿದ ಮಿಲನ್ ಬಾಯಿ ಎಂಬವರನ್ನು ಸಹಾಯಕಿಯನ್ನಾಗಿ ನೇಮಕ ಮಾಡಿದ್ದು ಮೇಲ್ಜಾತಿಯವರ ಕಣ್ಣು ಕೆಂಪಾಗಿಸಿದೆ.

ಎರಡು ವರ್ಷಗಳಿಂದ ಕೋವಿಡ್ ಸೋಂಕಿನ ಕಾರಣದಿಂದ ಅಂಗನವಾಡಿ ಮುಚ್ಚಿತ್ತು. ಈ ವೇಳೆ ಆಹಾರಧಾನ್ಯಗಳನ್ನು ನೇರವಾಗಿ ಫಲಾನುಭವಿಗಳ ಮನೆಗಳಿಗೆ ಸರಬರಾಜು ಮಾಡುತ್ತಿದ್ದುದರಿಂದ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ಇದೀಗ ಕೋವಿಡ್ ಸೋಂಕಿ ಇಳಿಮುಖವಾಗಿದ್ದು, ಎರಡು ವಾರಗಳ ಹಿಂದೆ ಅಂಗನವಾಡಿ ತೆರೆದು ವೇಳೆ ಸಮಸ್ಯೆ ಎದುರಾಗಿದೆ.

ಗ್ರಾಮದ ಮೇಲ್ಜಾತಿಯ ಕುಟುಂಬಗಳು ದಲಿತ ಸಮುದಾಯದ ಸಹಾಯಕಿಯನ್ನು ಬದಲಿಸಬೇಕು. ಇಲ್ಲವಾದರೆ ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಆಕ್ಷೇಪಿಸಿದರು. ಅಲ್ಲದೆ, ಗ್ರಾಮಸ್ಥರೇ ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಮೇಲ್ಜಾತಿಗೆ ಸೇರಿದ ಸ್ವಯಂಸೇವಕಿಯೊಬ್ಬರಿಂದ ಮಕ್ಕಳಿಗೆ ಆಹಾರ ತಯಾರಿಕೆಗೆ ಮುಂದಾಗಿದ್ದರು. ಅಂಗನವಾಡಿ ಶಿಕ್ಷಕಿ ಸುಮಿತ್ರಾ ಅವರು ದಲಿತ ಸಮುದಾಯಕ್ಕೆ ಸೇರಿದ್ದರೂ ಅವರೇನು ಅಡುಗೆ ಕೆಲಸ ಮಾಡದ ಹಿನ್ನೆಲೆಯಲ್ಲಿ ಅವರ ಬಗ್ಗೆ ಮೇಲ್ಜಾತಿಯವರಿಗೆ ಯಾವುದೇ ಆಕ್ಷೇಪವಿಲ್ಲ.

ಮೇಲ್ಜಾತಿಯವರ ಅಡ್ಡಿ ಸರಿಯಲ್ಲ: ‘ಬಸವ ಕಲ್ಯಾಣ' ಜಾತಿ ಸಾಮರಸ್ಯ ಹೆಸರಾಗಿರುವ ಊರು. ಇದೀಗ ಇದೇ ನಾಡಲ್ಲಿ ಅಸ್ಪøಶ್ಯತೆ ಆಚರಣೆ ಸರಿಯಲ್ಲ. ಅಧಿಕಾರಿಗಳ ಮನವೊಲಿಕೆ ಬಳಿಕವೂ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಪರೋಕ್ಷವಾಗಿ ಅಸ್ಪøಶ್ಯತೆ ಆಚರಣೆ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಗ್ರಾಮದಲ್ಲಿ ಎಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕು. ಹೀಗಾಗಿ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಬೇಕು' ಎಂದು ಹತ್ಯಾಳ ಗ್ರಾಮದ ದಲಿತ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.


‘ಅಂಗನವಾಡಿ ಸಹಾಯಕಿ ದಲಿತೆ ಎಂಬ ಕಾರಣಕ್ಕೆ ಗ್ರಾಮಸ್ಥರ ಆಕ್ಷೇಪವಲ್ಲ, ಬದಲಿಗೆ ಆಕೆ ಸಾಮಾನ್ಯ ವರ್ಗ ವಿಭಾಗದಿಂದ ಆಯ್ಕೆಯಾಗಿದ್ದು, ಮರಾಠ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡಬೇಕೆಂಬುದು ಅವರ ಆಗ್ರಹ. ಹೀಗಾಗಿ ಅವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ದಲಿತ ಸಮುದಾಯಕ್ಕೆ ಸೇರಿದ ಸಹಾಯಕಿ ಬದಲಾವಣೆ ಪ್ರಶ್ನೆಯೇ ಇಲ್ಲ'

-ವಿಜಯಲಕ್ಷ್ಮಿ ಕೊಲ್ಕಾರ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ


‘ಬಸವಕಲ್ಯಾಣ ತಾಲೂಕಿನ ಹತ್ಯಾಳ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 6 ತಿಂಗಳಿಂದ ಬೀಗ ಹಾಕಲಾಗಿದ್ದು, ಗ್ರಾಮದ ಮೇಲ್ವರ್ಗದ ಜನರು ಹೊಸದಾಗಿ ನೇಮಕಗೊಂಡ ದಲಿತ ಸಹಾಯಕಿ ಎಂಬ ಏಕೈಕ ಕಾರಣಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ. ದೂರು ನೀಡದಂತೆ ಸಹಾಯಕಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದೀಗ ಅಧಿಕಾರಿಗಳ ಮನವೊಲಿಕೆ ಬಳಿಕವೂ ಮೇಲ್ಜಾತಿಯವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಿರುವುದು ನಿಜಕ್ಕೂ ಬೇಸರದ ಸಂಗತಿ'

-ಹರೀಶ್ ಕಾಂಬಳೆ  ರ್‍ಯಾಪ್ ಗಾಯಕ, ಹತ್ಯಾಳ ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News