×
Ad

ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ; 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಶಾಲೆಗೆ ರಜೆ ಘೋಷಣೆ

Update: 2022-06-17 20:46 IST

ಬೆಂಗಳೂರು, ಜೂ.17: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಶಾಲೆಯಲ್ಲಿ ತರಗತಿವಾರು ಹತ್ತಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಸೋಂಕು ದೃಢಪಟ್ಟಲ್ಲಿ, ಕೂಡಲೇ ಅಂತಹ ಶಾಲೆಗಳಿಗೆ ರಜೆ ಘೋಷಿಸುವಂತೆ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

ಶಾಲೆಯ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರ ಪೂರ್ವಾನುಮತಿ ಪಡೆದು ಶಾಲೆಗೆ ಎರಡು-ಮೂರು ದಿನಗಳು ರಜೆಯನ್ನು ಘೋಷಿಸಬೇಕು. ಬಳಿಕ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸಂಪೂರ್ಣ ಶಾಲಾ ಕಟ್ಟಡಕ್ಕೆ ಸ್ಯಾನಿಟೈಸ್ ಮಾಡಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ರಜಾ ದಿನಗಳಲ್ಲಿನ ಪಾಠ-ಪ್ರವಚನಗಳನ್ನು ಮುಂದಿನ ಸರಕಾರಿ ರಜಾ ದಿನಗಳಲ್ಲಿ ಸರಿದೂಗಿಸುವಂತೆ ಶಿಕ್ಷಣ ಇಲಾಖೆಯು ತಿಳಿಸಿದೆ.

ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ, ಪೋಷಕರ ಉಪಸ್ಥಿತಿಯಲ್ಲಿ ತಪಾಸಣೆಗೆ ಒಳಪಡಿಸುವುದು. ಕೋವಿಡ್ ಸೋಂಕು ದೃಢಪಟ್ಟಲ್ಲಿ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ಅಂತಹ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಗತ್ಯಾನುಸಾರ ಕೆಲವು ದಿನಗಳಿಗೆ ಮಾತ್ರ ರಜೆಯನ್ನು ನೀಡುವುದು ಎಂದು ತಿಳಿಸಿದೆ.

ಒಂದು ವೇಳೆ ಕೋವಿಡ್ ಸೋಂಕು ಪ್ರತಿಕೂಲ ಉಂಟಾದಲ್ಲಿ, ಶೈಕ್ಷಣಿಕ ಚಟುವಟಿಕೆಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಮುಂದುವರೆಸಿ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿಂದುಳಿಯದಂತೆ ಕ್ರಮವಹಿಸಲು ಇಲಾಖೆಯು ನಿರ್ದೇಶನ ನೀಡಿದೆ.

ಶಾಲಾ ಮುಖ್ಯೋಪಾಧ್ಯಯರು ಹಾಗೂ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ಶುದ್ಧ ಬಿಸಿನೀರನ್ನು ತರುವಂತೆ ಸೂಚಿಸಬೇಕು. 12-14ರ ವಯೋಮಾನದ ಎಲ್ಲಾ ವಿದ್ಯಾರ್ಥಿಗಳು ಕೋವಿಡ್ ಚುಚ್ಚುಮದ್ದನ್ನು ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಮಕ್ಕಳು ಒಂದು ವೇಳೆ ಕೋವಿಡ್ ಲಸಿಕೆ ಪಡೆಯದೇ ಇದ್ದಲ್ಲಿ ಸರಕಾರ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಚುಚ್ಚುಮದ್ದು ಕೊಡಿಸಬೇಕು ಎಂದು ಇಲಾಖೆಯು ಸುತ್ತೋಲೆಯಲ್ಲಿ ತಿಳಿಸಿದೆ.

ಕೋವಿಡ್ ನಿಯಂತ್ರಣದ ಬಗ್ಗೆ ಶಿಕ್ಷಕರು ಮಕ್ಕಳು, ಮಕ್ಕಳ ಪೋಷಕರಿಗೆ ತಿಳುವಳಿಕೆ ಮೂಡಿಸುವುದು. ಎಲ್ಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಪ್ರತಿದಿನ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸುವುದು. ಕಾಲಕಾಲಕ್ಕೆ ಸರಕಾರ ನೀಡುವ ಕೋವಿಡ್-19ರ ಸೂಚನೆಗಳನ್ನು ತಾಲೂಕು, ಜಿಲ್ಲಾಡಳಿತಗಳ ಸಹಕಾರದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ನಡೆಸಿಕೊಂಡು ಹೋಗುವಂತೆ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸಿದೆ.

ಶಾಲೆಗಳಲ್ಲಿ ಶಿಕ್ಷಕರು, ಮುಖ್ಯ ಶಿಕ್ಷಕರು, ಸೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News