×
Ad

ಡಿ ನೋಟಿಫಿಕೇಷನ್ ಪ್ರಕರಣ: ಜಾಮೀನು ಕೋರಿ ಬಿಎಸ್‍ವೈ ಅರ್ಜಿ

Update: 2022-06-17 20:57 IST

ಬೆಂಗಳೂರು, ಜೂ.17: ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐ.ಟಿ ಕಾರಿಡಾರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾಮೀನು ಕೋರಿ ನಗರದ ಜನಪ್ರತಿನಿಧಿಗಳ ಕೋರ್ಟ್‍ಗೆ  ಅರ್ಜಿ ಸಲ್ಲಿಸಿದ್ದಾರೆ. 

ಪ್ರಕರಣ ಸಂಬಂಧ ಶುಕ್ರವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‍ನ ಆವರಣದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಮ್ಮ ವಕೀಲರ ಸಮೇತ ಖುದ್ದು ಹಾಜರಾದ ಬಿಎಸ್‍ವೈ ಅವರು ಜಾಮೀನು ಅರ್ಜಿ ಸಲ್ಲಿಸಿದರು. 

ಅರ್ಜಿ ಸ್ವೀಕರಿಸಿದ ನ್ಯಾಯಾಧೀಶರು, ದೂರುದಾರರ ಪರ ವಕೀಲರಿಂದ ಪ್ರತಿಕ್ರಿಯೆ ಕೇಳಿದಾಗ, ದೂರುದಾರರ ಪರ ವಕೀಲರು, ಆರೋಪಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ಬಳಿಕ ನಮ್ಮ ಪ್ರತ್ಯುತ್ತರವನ್ನು ಸಲ್ಲಿಸುತ್ತೇವೆ. ಆಕ್ಷೇಪಣೆ ಸಲ್ಲಿಕೆಗೆ ಸಮಯಾವಕಾಶ ನೀಡಬೇಕು ಎಂದು ಪೀಠಕ್ಕೆ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು. ಬಿಎಸ್‍ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.

ಏನಿದು ಪ್ರಕರಣ: ಮಾಹಿತಿ ತಂತ್ರಜ್ಞಾನ (ಐ.ಟಿ) ಕಾರಿಡಾರ್ ನಿರ್ಮಾಣಕ್ಕಾಗಿ ಬೆಂಗಳೂರಿನ ಬೆಳ್ಳಂದೂರು ಮತ್ತು ದೇವರ ಬೀಸನಹಳ್ಳಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪವನ್ನು ಬಿ.ಎಸ್. ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕ ಆರ್.ವಿ.ದೇಶಪಾಂಡೆ, ಬಿಎಸ್‍ವೈ ಸೇರಿ ಹತ್ತು ಜನರ ವಿರುದ್ಧ ವಾಸುದೇವ ರೆಡ್ಡಿ 2013ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಖಾಸಗಿ ದೂರು ಸಲ್ಲಿಸಿದ್ದರು. ಆರ್.ವಿ. ದೇಶಪಾಂಡೆ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಈಗಾಗಲೇ 2015ರಲ್ಲಿ ರದ್ದುಗೊಳಿಸಿದೆ. ಬಾಕಿ ಆರೋಪಿಗಳ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯವೇ ರದ್ದುಗೊಳಿಸಿತ್ತು. ಸದ್ಯ ಯುಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ 13(1)(ಡಿ) ಮತ್ತು 13(2)ರ ಅಡಿಯಲ್ಲಿನ ಆರೋಪಗಳ ವಿಚಾರಣೆ ಜೀವಂತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News