×
Ad

ಮುಂದಿನ 3 ದಿನ ರಾಜ್ಯದ ಹಲವೆಡೆ ಭಾರೀ ಮಳೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Update: 2022-06-17 21:07 IST

ಬೆಂಗಳೂರು, ಜೂ.17: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಜೂ.18ರಿಂದ ಜೂ.20ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಿಗೆ ಜೂ.18 ರಿಂದ 19ರವರೆಗೆ ಯಲ್ಲೋ ಅಲರ್ಟ್ ನೀಡಿದರೆ, ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜೂ.18 ರಿಂದ ಜೂ.20ರವರೆಗೆ ಯಲ್ಲೋ ಅಲರ್ಟ್ ನೀಡಲಾಗಿದೆ.

ರಾಜ್ಯಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿ ವಾರಗಳೇ ಉರುಳಿದರೂ, ಇನ್ನೂ ಮಳೆ ಬಿರುಸು ಪಡೆಯದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಮೇ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಸಂತೋಷಗೊಂಡು ಭೂಮಿ ಹಸನುಗೊಳಿಸಿಕೊಂಡಿದ್ದ ರೈತರು, ಈಗ ಬಿತ್ತನೆ ಮಾಡಲು ಮಳೆಗಾಗಿ ಕಾದಿದ್ದರು. ಇದೀಗ ಉತ್ತಮ ಮಳೆ ಬೀಳುತ್ತಿರುವುದು ರೈತರಲ್ಲಿ ಸಂತಸ ತಂದಿದೆ. 

ರಾಜಧಾನಿಯಲ್ಲಿ ಮಳೆ

ಬೆಂಗಳೂರು ನಗರದಲ್ಲಿ ಬಿಡುವು ನೀಡುತ್ತಲೇ ಮಳೆ ಆಗುತ್ತಿದ್ದು, ಗುರುವಾರದಂತೆ ಶುಕ್ರವಾರವೂ ಮಳೆ ಸುರಿಯಿತು. 
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಇತ್ತು. ಸಂಜೆ ನಂತರ ತುಂತುರು ಮಳೆ ಆರಂಭವಾಗಿ, ಬಳಿಕ ಜೋರಾಯಿತು. 

ಯಶವಂತಪುರ, ಎಂ.ಜಿ.ರಸ್ತೆ, ಶಿವಾಜಿನಗರ, ರಾಜಾಜಿನಗರ, ವಿಜಯನಗರ, ಚಂದ್ರಾಲೇಔಟ್, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಆರ್.ಟಿ.ನಗರ, ಮೆಜೆಸ್ಟಿಕ್, ಲಾಲ್‍ಬಾಗ್, ಎಚ್‍ಎಸ್‍ಆರ್ ಲೇಔಟ್ ಹಾಗೂ ಸುತ್ತಮುತ್ತ ಮಳೆ ಸುರಿಯಿತು. ಮುಂಗಾರು ಮಳೆ ಆರಂಭವಾಗಿದ್ದು, ನಗರದಲ್ಲಿ ಬಿಡುವು ನೀಡುತ್ತಲೇ ಜೋರು ಮಳೆ ಆಗುತ್ತಿದೆ. ಮಳೆ ಸುರಿದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News