ವಿದ್ಯಾಸಿರಿ ಸ್ಕಾಲರ್ ಶಿಪ್‍ | ಶೇ. 40 ಕಮಿಷನ್ ಸರಕಾರದಿಂದ ಸ್ಫೂರ್ತಿ ಪಡೆದು ಸುಲಿಗೆ: ಸಿದ್ದರಾಮಯ್ಯ

Update: 2022-06-17 16:28 GMT

ಬೆಂಗಳೂರು, ಜೂ.17: ಹಾವೇರಿ ಸರಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಸಿರಿ ಸ್ಕಾಲರ್ ಶಿಪ್‍ಗೆ ಕನ್ನ ಹಾಕಿದ ಪ್ರಕರಣದಲ್ಲಿ ಅಚ್ಚರಿ ಪಡುವಂತಹದೇನಿಲ್ಲ. ರಾಜ್ಯ ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಸರಕಾರದಿಂದ ಸ್ಫೂರ್ತಿ ಪಡೆದಿರುವ ಸರಕಾರಿ ನೌಕರರು ನೇರವಾಗಿ ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹೀಗೆ ಎಲ್ಲರ ಸುಲಿಗೆಗೆ ಇಳಿದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಂದೆಡೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ನಮ್ಮ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ ಹಣ ನೀಡದೆ ನಿರ್ಲಕ್ಷಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ, ಇನ್ನೊಂದೆಡೆ ಒಂದಿಷ್ಟು ಮಂಜೂರಾಗಿರುವ ಹಣವನ್ನು ಕೂಡಾ ಬಿಡದೆ ಸರಕಾರವೇ ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಾಸ್ಟೆಲ್‍ನಲ್ಲಿ ಪ್ರವೇಶ ಸಿಗದೆ ಇದ್ದ ವಿದ್ಯಾರ್ಥಿಗಳು ಕೊಠಡಿ ಬಾಡಿಗೆಗೆ ಪಡೆದು ಅಡುಗೆ ಮಾಡಿಕೊಂಡು ವ್ಯಾಸಂಗ ಮಾಡಲು ನೆರವಾಗುವಂತೆ ತಿಂಗಳಿಗೆ 1500 ರೂ.ನೀಡುವ ಯೋಜನೆ ವಿದ್ಯಾಸಿರಿ. ನನ್ನ ಸ್ವಂತ ಅನುಭವದ ಆಧಾರದಲ್ಲಿ ರೂಪಿಸಿದ್ದ ಈ ಯೋಜನೆಗೆ ರಾಜ್ಯ ಬಿಜೆಪಿ ಸರಕಾರ ಕಲ್ಲು ಹಾಕುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

2017-18ರ ಸಾಲಿನಲ್ಲಿ ವಿದ್ಯಾಸಿರಿ ಯೋಜನೆಗೆ 88,549 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರಕಾರ ಈ ಯೋಜನೆಗೆ ಹಣ ನೀಡದೆ ಹಾಸ್ಟೆಲ್ ಸೌಲಭ್ಯ ಇಲ್ಲದ ಹಿಂದುಳಿದ ಜಾತಿಯ ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿದ್ಯಾಸಿರಿ ಯೋಜನೆಯೊಂದೇ ಅಲ್ಲ, ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಹಾಸಿಗೆ-ಹೊದಿಕೆ-ಸೋಪ್‍ಗಳನ್ನೂ ಕೊಟ್ಟಿಲ್ಲ. ವಿದ್ಯಾರ್ಥಿ ವೇತನವನ್ನೂ ಬಾಕಿ ಇಟ್ಟುಕೊಳ್ಳಲಾಗಿದೆ. ಹಾಸ್ಟೆಲ್ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಿಲ್ಲ. ಇವೆಲ್ಲವೂ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆಗೆ ಅವಶ್ಯಕ ಹಣವನ್ನು ರಾಜ್ಯ ಬಿಜೆಪಿ ಸರಕಾರ ತಕ್ಷಣ ಮಂಜೂರು ಮಾಡಬೇಕು. ಈಗಾಗಲೇ ಮಂಜೂರಾಗಿರುವ ಹಣವನ್ನು ಸುಲಿಗೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News