ಸಿದ್ದರಾಮಯ್ಯ ವಿರುದ್ಧ ದೂರು ಮೂರ್ಖತನದ್ದು: ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಮಹದೇವಪ್ಪ ಆಕ್ರೋಶ

Update: 2022-06-18 12:44 GMT

ಬೆಂಗಳೂರು, ಜೂ. 18: ‘ಮನುವಾದಿಗಳ ಮತ್ತು ಸನಾತನವಾದದ ಗುಲಾಮಗಿರಿಯ ಷಡ್ಯಂತ್ರಕ್ಕೆ ಒಳಗಾಗಬೇಡಿ' ಎಂಬ ಸಿದ್ದರಾಮಯ್ಯ ಅವರ ಸರಳ ಭಾಷೆಯನ್ನು ಅರ್ಥ ಮಾಡಿಕೊಳ್ಳದ ಬಿಜೆಪಿ ಮೇಲ್ಮನೆ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿರುವುದು ಮೂರ್ಖತನದ ಮತ್ತು ಅಜ್ಞಾನದ ಸಂಕೇತ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಪುಸ್ತಕಗಳನ್ನು ಹೊತ್ತುಕೊಳ್ಳಿ ಎಂಬ ಅಂಬೇಡ್ಕರ್ ಮಾತಿಗೆ ಎದುರಾಗಿ ಆರೆಸ್ಸೆಸ್‍ನವರ ಚಡ್ಡಿಯನ್ನು ಹೊತ್ತು ನಡೆದು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ನಡೆದುಕೊಂಡ ನಾರಾಯಣಸ್ವಾಮಿಯವರು ವಾಸ್ತವದಲ್ಲಿ ಅವರನ್ನು ಬಳಸಿಕೊಂಡು ಆರೆಸ್ಸೆಸ್ ಮತ್ತು ಬಿಜೆಪಿಗರು ದಲಿತರ ಮೇಲೆ ಮಾಡುತ್ತಿರುವ ಗುಲಾಮಗಿರಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು.

ಆದರೆ ಇವರು, ಬಿಜೆಪಿ ಮತ್ತು ಆರೆಸ್ಸೆಸ್‍ನ ಅಸ್ಪೃಶ್ಯತೆ ಮತ್ತು ಗುಲಾಮಗಿರಿ ತಂತ್ರಗಳಿಗೆ ಒಳಗಾಗಬೇಡಿ ಎಂದು ದಲಿತರ ಬಂಧುವಾಗಿ ಮಾತನಾಡಿರುವ ಸಿದ್ದರಾಮಯ್ಯರ ವಿರುದ್ಧವೇ ಅಸ್ಪೃಶ್ಯತೆ ತಡೆ ಕಾನೂನನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕ್ರಮ ಸರಿಯಲ್ಲ. ಹಿಂದೊಮ್ಮೆ ಶಿವಮೊಗ್ಗದಲ್ಲಿ ನಡೆದ ಛಲವಾದಿ ಸ್ವಾಭಿಮಾನಿ ಸಮಾವೇಶದೊಳಗೆ ‘ನಾವು ಯಡಿಯೂರಪ್ಪನವರ ಮನೆ ಕಸ ಗುಡಿಸಲೂ ಸಿದ್ಧರಿದ್ದೇವೆ ಎಂದು ಹೇಳಿದ ಮಹಾನುಭಾವರ ಗುಂಪಿನಲ್ಲಿ, ಈ ಮಹಾಶಯ ಇದ್ದರು ಎಂಬುದನ್ನು ನಾನು ಈ ವೇಳೆ ನೆನಪಿಸಿಕೊಳ್ಳಲು ಬಯಸುತ್ತೇನೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಛಲವಾದಿ ಎಂದರೆ ಸ್ವಾಭಿಮಾನದ ಸಂಕೇತ. ಅಂತಹ ಹೆಸರಿಟ್ಟುಕೊಂಡು ಸಮಾವೇಶ ಮಾಡಿ, ಕೇವಲ ಸ್ವಾರ್ಥ ಲಾಭಕ್ಕಾಗಿ ‘ಯಡಿಯೂರಪ್ಪನವರ ಮನೆ ಕಸ ಹೊಡೆಯಲೂ ನಾವು ಸಿದ್ಧರಿದ್ದೇವೆ' ಎಂಬ ಮಾತನ್ನು ಆಡಿದ ದಲಿತರ ಸ್ವಾಭಿಮಾನವನ್ನು ಅಕ್ಷರಶಃ ಬಲಿಕೊಡುವ ಕೆಲಸ ಮಾಡಿದ ಇಂತವರು ಹೋಗಿ ದಲಿತರ ಪರವಾಗಿ ಕಾನೂನುಗಳನ್ನು ರೂಪಿಸಿ, ಎಸ್ಸಿ-ಎಸ್ಟಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಹಣಕಾಸಿನ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿಯನ್ನು ತೋರಿದ ದಲಿತರ ಬಂಧು ಸಿದ್ದರಾಮಯ್ಯ ವಿರುದ್ಧ ದೂರು ನೀಡುತ್ತಾರೆಂದರೆ ಇವರ ಆರೆಸ್ಸೆಸ್ ಚಡ್ಡಿ ಹೊರುವ ಗುಲಾಮಗಿರಿಗೆ ಇನ್ನೇನು ಹೇಳುವುದು?' ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ.

‘ಒಂದು ವಿಧಾನ ಪರಿಷತ್ ಸ್ಥಾನ ನೀಡಿ ಕೇವಲ ಅಮಾನವೀಯ ಕೆಲಸಗಳಿಗೆ ಮತ್ತು ಕೆಳವರ್ಗದ ರಾಜಕಾರಣವನ್ನು ದುರ್ಬಲಗೊಳಿಸಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಗತಿಯು ಇವರಿಗೆ ಅರ್ಥವಾಗದೇ ಇದ್ದ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ಮಾಡುತ್ತಿರುವ ಗುಲಾಮಗಿರಿಗೆ ಇವರ ಒಪ್ಪಿಗೆ ಇದೆ ಎಂದೇ ತಾನೆ ಇದರ ಅರ್ಥ?' ಎಂದು ಮಹದೇವಪ್ಪ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News