ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ ನೇಮಕಾತಿ ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

Update: 2022-06-18 12:51 GMT

ಕಲಬುರಗಿ, ಜೂ. 18: ‘ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವುದು ಸರಿಯಲ್ಲ. ಇಲ್ಲಿ ನಿಯೋಜನೆಗೊಳ್ಳುವವರು ಇಲಾಖೆಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ವರ್ಷಗಳೇ ಬೇಕು. ಹೀಗಿರುವಾಗಿ ನೀವು ಕೇವಲ ನಾಲ್ಕೇ ವರ್ಷಕ್ಕೆ ಮನೆಗೆ ಹೋಗಿ ಎಂದರೆ ಹೇಗಾಗುತ್ತದೆ?' ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಕ್ಷಣಾ ಇಲಾಖೆಗೆ ಸೇರ್ಪಡೆ ಆಗುವವರಿಗೆ ಅಗತ್ಯ ತರಬೇತಿ ಕೊಟ್ಟು ನಾಲ್ಕು ವರ್ಷದಲ್ಲಿ ಅವರನ್ನು ನಿವೃತ್ತಿಗೊಳಿಸಿದರೆ ಯಾವ ಸೈನಿಕ ಸರಿಯಾದ ತರಬೇತಿ ಹೊಂದಲು ಸಾಧ್ಯವಿಲ್ಲ. ಸೇನೆಗೆ ಭರ್ತಿ ಆಗುವವರು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿ ಹೋಗುತ್ತಾರೆ. ಅಂತಹವರನ್ನೂ ನೀವು ಗುತ್ತಿಗೆ ನೌಕರರೆಂದು ಪರಿಗಣಿಸುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋಚಿಂಗ್ ಸೆಂಟರ್ ನಲ್ಲಿ ಹಣ ಕೊಟ್ಟು ಒಂದಿಷ್ಟು ತರಬೇತಿ ಪಡೆದಿರುತ್ತಾರೆ. ನಾಲ್ಕು ವರ್ಷದಲ್ಲಿ ಅಷ್ಟು ಹಣ ವಾಪಸ್ ಬರೋದಿಲ್ಲ. ಇದನ್ನು ದೇಶದ ಯುವಕರು ಯಾವುದೇ ಕಾರಣಕ್ಕೂ ಒಪ್ಪೋದಿಲ್ಲ. ರಕ್ಷಣೆ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇಂತಹ ಯೋಜನೆ ತಂದು ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದೆ' ಎಂದು ಖರ್ಗೆ ಎಚ್ಚರಿಸಿದರು.

‘ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಯಾವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ರಕ್ಷಣಾ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಕೇಂದ್ರ ಸರಕಾರದ ಅನೇಕ ಹುದ್ದೆಗಳು ಇವೆ. ಅದಕ್ಕೂ ಕೇಂದ್ರ ಸರಕಾರ ಸಹಾಯ ಮಾಡುತ್ತಿಲ್ಲ. ಹೀಗಾಗಿ, ರಾಜ್ಯ ಸರಕಾರವೂ ಖಾಲಿ ಹುದ್ದೆಗಳನ್ನ ಭರ್ತಿ ಮಾಡಲು ಮುಂದಾಗುತ್ತಿಲ್ಲ' ಎಂದು ಅವರು ಟೀಕಿಸಿದರು.

‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಮ್ಮ ಪಕ್ಷದ ಆಸ್ತಿ. ಇದನ್ನು ನಾವು ಉಳಿಸಿಕೊಳ್ಳಲಿಲ್ಲ ಎಂದರೆ ನೆಹರೂ ಯಾವ ಉದ್ದೇಶಕ್ಕಾಗಿ ಪತ್ರಿಕೆ ಕಟ್ಟಿದ್ದರೋ ಅದು ವಿಫಲವಾಗುತ್ತದೆ. ನಮ್ಮ ತತ್ವ, ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಈ ಹೋರಾಟ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರಿಗೆ ಇರುವ ಜನ ಬೆಂಬಲ ಕುಗ್ಗಿಸಲು ಕುತಂತ್ರ ಮಾಡಲಾಗುತ್ತಿದ್ದು, ಐಟಿ, ಈಡಿಯಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ' ಎಂದು ಖರ್ಗೆ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News