ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಬಿಜೆಪಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿ

Update: 2022-06-18 15:27 GMT

ಬೆಂಗಳೂರು, ಜೂ.18:  ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ವರ್ಗಾವಣೆ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಹೋರಾಟಕ್ಕೆ ಸ್ಪಂದಿಸಿ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀನೀವಾಸಾಚಾರಿ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು 2020ರ ಡಿ.28ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ. ಅಲ್ಲಿಂದ ಇಲ್ಲಿಯವರೆಗೂ 1-2 ಆದೇಶಗಳು ಬಿಟ್ಟು, ಪ್ರಮುಖ ಬೇಡಿಕೆಗಳ ಬಗ್ಗೆ ಆದೇಶಗಳಾಗಿ ನೌಕರರ ಕೈಗೆ ಸೇರಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಗಾರಿದ್ದಾರೆ.

2022ರ ಫೆ.24ರಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಶ್ರೀನಿವಾಸಚಾರಿ ನೇತೃತ್ವದಲ್ಲಿ ರಚಿಸಿದ ಸಮಿತಿಯ ವರದಿ ಜಾರಿಗೆ ಸರಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಗಮನಕ್ಕೆ ತಂದು ಆದೇಶ ಹೊರಡಿಸುವುದಾಗಿ’ ತಿಳಿಸಿದ ಭರವಸೆ, ಭರವಸೆಯಾಗಿಯೇ ಉಳಿದಿದೆ ಹೊರತು ಅಧಿಕಾರಿಗಳು ಅನುಷ್ಠಾನ  ಮಾಡುವ ಗೋಜಿಗೇ ಹೋಗಿಲ್ಲ. ಇಂತಹ ಕಾಳಜಿ ಇಲ್ಲದ ಅಧಿಕಾರಿಗಳನ್ನು ಕೂಡಲೇ ಬದಲಾಯಿಸಲು ಅವರು ಆಗ್ರಹಿಸಿದ್ದಾರೆ.

ಸೇವಾಭದ್ರತೆ/ ಸೇವೆ ಖಾಯಂ ಮಾಡುವ ಬಗ್ಗೆ ಬೇಡಿಕೆ ಇದ್ದು, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಸಾಧ್ಯವಿದ್ದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯ ಇಲ್ಲ. ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದರ ಪ್ರತಿಯನ್ನು ನೀಡಲು ಕೋರಿರುವ ಅವರು, ಸರಕಾರಕ್ಕೆ ಬದ್ಧತೆ ಇದ್ದಲ್ಲಿ, ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಮಾತ್ರ ಸಾಧ್ಯ ಇದೆ. ಸಮಗ್ರ ಚಿಂತನೆ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಸುಳ್ಳು ಹೇಳಿದ ಸಚಿವ: ವರದಿಯ ಬಹುತೇಕ ಶಿಫಾರಸ್ಸುಗಳ ಈಡೇರಿಕೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಸಚಿವರ ಉತ್ತರ ಸುಳ್ಳಾಗಿದ್ದು. ಇಲಾಖೆ ಅಧಿಕಾರಿಗಳು ಅತ್ಯಂತ ಅಸಮರ್ಪಕವಾಗಿದ್ದು, ಇಲ್ಲಿಯವರೆಗೆ 2022ರ ಫೆ.24ರ ಸಭಾ ನಡಾವಳಿಗಳನ್ನು ನೀಡದ ಇವರು ಬೇಡಿಕೆಗಳ ಆದೇಶಗಳನ್ನು ಜಾರಿ ಮಾಡಿರುವುದಾಗಿ ಸಚಿವರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದ್ದಾರೆ.

ಸಚಿವರು ಉಲ್ಲೇಖಿಸಿರುವ ರಜೆಗಳು ಈ ಹಿಂದಿನಿಂದಲೇ ಜಾರಿಯಲ್ಲಿದ್ದು, ನಮ್ಮ ಬೇಡಿಕೆ 10 ದಿನ ಸಾಂದರ್ಭಿಕ ರಜೆ ಹೊರತು ಪಡಿಸಿ, ಬೇರೆ ಯಾವುದೇ ರಜೆ ಇಲ್ಲದೇ ಇರುವುದರಿಂದ ರಜೆಗಳನ್ನು ಹೆಚ್ಚಿಸಲು ಕೋರಲಾಗಿತ್ತು. ಆದರೆ ಈ ವಿಷಯವಾಗಿ ಯಾವುದೇ ಆದೇಶವನ್ನು ಇಲ್ಲಿಯವರೆಗೂ ಹೊರಡಿಸಲಾಗಿಲ್ಲ ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ವರ್ಗಾವಣೆ ವಿಷಯವಾಗಿ ನಮ್ಮ ಬೇಡಿಕೆ “ಜಿಲ್ಲೆಯಿಂದ ಜಿಲ್ಲೆಗೆ” ಒಂದು ಬಾರಿ ಅವಕಾಶ ನೀಡಿ ವರ್ಗಾವಣೆ ನೀಡಲು ಆದೇಶ ಹೊರಡಿಸಲು ಸಹಮತಿಸಲಾಗಿತ್ತು. ಆದರೆ ಇಲ್ಲೂ ಸಹ ಮತ್ತೊಮ್ಮೆ ಅಧಿಕಾರಿಗಳು ಸಚಿವರಿಗೆ ದಾರಿ ತಪ್ಪಿಸುತ್ತಿರುವ ಹಾಗೆ ಭಾಸವಾಗುತ್ತಿದೆ. ಅದೇ ರೀತಿ, ವಿಮಾ ಯೋಜನೆ ಬಗ್ಗೆಯೂ ಅಧಿಕೃತ ಯಾವುದೇ ಆದೇಶವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿವರು ಸಭೆಯಲ್ಲಿ ಸಮ್ಮತಿಸಿದ ಅಂಶಗಳು ಅನುಷ್ಠಾನಗೊಳ್ಳದೆ ಇದ್ದಾಗ ನೌಕರರ ಪರವಾಗಿ ಧ್ವನಿ ಎತ್ತಿದ್ದೇನೆ ಮತ್ತು ಆರೋಗ್ಯ ಇಲಾಖೆ ಅಧೀನದ ಅಧಿಕಾರಿಗಳು ಅಸಮರ್ಪಕವಾಗಿ ಕೆಲಸ ಮಾಡಿದರೆ, ಅದು ತಮ್ಮ ವಿಫಲತೆ ಎಂಬುದನ್ನು ಎಚ್ಚರಿಸುವ ಕಾರ್ಯನಿರ್ವಹಿಸಿದ್ದೇನೆ. ನೌಕರರ ಬೇಡಿಕೆಗಳ ವಿಷಯದಲ್ಲಿ ಆಗುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ಮತ್ತು ಶಾಸಕನಾಗಿ ತಮ್ಮ ಕೆಲವು ಧೋರಣೆಗಳನ್ನು ಸರಿಪಡಿಸಿಕೊಳ್ಳಲು ಟೀಕಿಸಿದ್ದೇನೆ ವಿನಹ ವ್ಯಕ್ತಿಗತವಾಗಿ ಯಾವುದೇ ಸ್ವಾರ್ಥದಿಂದಲ್ಲ ಎಂದು ಆಯನೂರು ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News