ಮಂಡ್ಯ| ಮಹಿಳೆ ಹತ್ಯೆ ಪ್ರಕರಣ; 24 ಗಂಟೆಯೊಳಗೆ ಆರೋಪಿಯ ಬಂಧನ

Update: 2022-06-18 15:54 GMT
ರವಿ- ಆರೋಪಿ 

ಮಂಡ್ಯ, ಜೂ.18: ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಜೂ.15 ರಂದು ಹಾಡಹಗಲೇ ನಡೆದಿದ್ದ ಮಹಿಳೆಯ ಭೀಕರವಾಗಿ ಹತ್ಯೆ ಪ್ರಕರಣದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಕಿಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಿಕ್ಕೇರಿಯ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಮಾಲಕಿ ಪುಷ್ಪಲತಾ ಅಲಿಯಾಸ್ ನಳಿನಾ ಅವರನ್ನು ಜೂ.15ರಂದು ಮಧ್ಯಾಹ್ನ ಕಿಕ್ಕೇರಿಯ ಅವರ ಮನೆಯಲ್ಲಿ ಕತ್ತುಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಆಕೆಯ ಪುತ್ರ ನೀಡಿದ ದೂರಿನ ಮೇರೆಗೆ ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹತ್ಯೆಗೈದು ನಾಪತ್ತೆಯಾಗಿ ನಾಗರಿಕರ ನಿದ್ದೆಗೆಡಿಸಿದ ದುಷ್ಕರ್ಮಿಯನ್ನು ಪತ್ತೆಹಚ್ಚಲು ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ನಿರ್ದೇಶನದಂತೆ ನಾಗಮಂಗಲ ಡಿವೈಎಸ್ಪಿ ನವೀನ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ದೀಪಕ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

ಕೊಲೆಯಾದ ಪುಷ್ಪಲತಾ ಅವರ ಸ್ವಂತ ಗ್ರಾಮ ಡಾಣನಹಳ್ಳಿ ಗ್ರಾಮದಲ್ಲಿ ಪುಷ್ಪಲತಾ ಅವರ ಮನೆ, ಜಮೀನು ವಹಿವಾಟು ನೋಡಿಕೊಂಡಿದ್ದ ಟ್ರ್ಯಾಕ್ಟರ್ ಚಾಲಕ ಕಿಕ್ಕೇರಿ ಹೋಬಳಿ ಉದ್ದಿನಮಲ್ಲನ ಹೊಸೂರು ಗ್ರಾಮದ ಯುವಕ ರವಿ ಕೊಲೆ ಆರೋಪಿಯಾಗಿದ್ದು, ಆತನನ್ನ ಪೊಲೀಸರು ಬಂಧಿಸಿದ್ದಾರೆ. 

ಹಣಕಾಸಿನ ವಿಚಾರವಾಗಿ ವೈಮನಸ್ಸು ಬಂದಿದ್ದು, ಈ ಹಿನ್ನೆಲೆಯಲ್ಲಿ ಪುಷ್ಪಲತಾ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿ ರವಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಶೀಘ್ರ ಪತ್ತೆಹಚ್ಚಿದ ಪೊಲೀಸರ ಕಾರ್ಯವನ್ನು ನಾಗರಿಕರು ಶ್ಲಾಘಿಸಿದ್ದಾರೆ.

ಕಿಕ್ಕೇರಿ ಠಾಣೆಯ ಪಿಎಸ್ಸೈ ಸಿದ್ದಲಿಂಗಪ್ಪ, ಎಎಸ್ಸೈ ಶಾಂತಕುಮಾರ್, ಪೊಲೀಸ್ ಸಿಬ್ಬಂದಿಗಳಾದ ವಿನೋದ್, ವಿನಯ್, ಪುನೀತ್, ಮಂಜು, ಮಹದೇವ್, ಇತರರು ವಿಶೇಷ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News