ಅಲೆಮಾರಿ-ಅರೆ ಅಲೆಮಾರಿ ಜನಾಂಗಕ್ಕೂ ಮನೆ: ಸಚಿವ ವಿ.ಸೋಮಣ್ಣ

Update: 2022-06-18 16:43 GMT

ಕಲಬುರಗಿ, ಜೂ.18: ರಾಜ್ಯದಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂಬ ಸದಾಶಯದಿಂದ ಮುಖ್ಯ ವಾಹಿನಿಯಿಂದ ವಂಚಿತರಾಗಿರುವ 69 ಸಾವಿರ ಅಲೆಮಾರಿ, ಅರೆ ಅಲೆಮಾರಿ, ಕಾಡುಗೊಲ್ಲ, ಸುಡಗಾಡ ಸಿದ್ಧರು, ಹಕ್ಕಿ-ಪಿಕ್ಕಿ, ಬುಡಬುಡಕಿಯರ ಕುಟುಂಬಗಳನ್ನು ಗುರುತಿಸಲಾಗಿದ್ದು, ಈ ಪೈಕಿ 39 ಸಾವಿರ ಕುಟುಂಬಕ್ಕೆ ಮನೆ ನೀಡಲು ನಿರ್ಧರಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಶನಿವಾರ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್-ಸರ್ವರಿಗೂ ಸೂರು ಯೋಜನೆಯಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲಬುರಗಿ ನಗರದ 7 ಕೊಳಚೆ ಪ್ರದೇಶದಲ್ಲಿ 92.48 ಕೋಟಿ ರೂ. ವೆಚ್ಚದಲ್ಲಿ 1447 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು 1447 ಮನೆಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕೋರಿಕೆಯಂತೆ ಇನ್ನೂ ಹೆಚ್ಚುವರಿ 500 ಮನೆ ಇದೇ ಕಾಮಗಾರಿಯಲ್ಲಿ ನಿರ್ಮಿಸಲಾಗುವುದು. ಒಟ್ಟಾರೆ 100 ಕೋಟಿ ರೂ. ವೆಚ್ಚದಲ್ಲಿ 1,447 ಜೊತೆಗೆ 500 ಹೆಚ್ಚುವರಿ ಮನೆಗಳನ್ನು ನಿರ್ಮಿಸಿ ಬರುವ ಜನವರಿ-ಫೆಬ್ರವರಿಯಲ್ಲಿ ಇದನ್ನು ಉದ್ಘಾಟಿಸಿ ಅರ್ಹ ಬಡವರಿಗೆ ಹಂಚಿಕೆ ಮಾಡಲಾಗುವುದು. ಮನೆ ಹಂಚಿಕೆ ಜವಾಬ್ದಾರಿ ಶಾಸಕರದಾಗಿದ್ದು, ಜಾತಿ, ಧರ್ಮ ನೋಡದೆ ಅರ್ಹ ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ನಮ್ಮ ಸರಕಾರದ ಅವಧಿಯಲ್ಲಿಯೇ ಗ್ರಾಮೀಣ ಭಾಗದಲ್ಲಿ 4 ಲಕ್ಷ ಮತ್ತು ನಗರದ ಭಾಗದಲ್ಲಿ 1 ಲಕ್ಷ ಸೇರಿದಂತೆ 5 ಲಕ್ಷ ಮನೆ ನಿರ್ಮಿಸಿ ಬಡವರಿಗೆ ಹಂಚುವ ಗುರಿ ಹೊಂದಿದ್ದು, ಈಗಾಗಲೆ 1.80 ಲಕ್ಷ ಮನೆ ನಿರ್ಮಿಸಲಾಗಿದೆ. ಮನೆ ಪಡೆಯಲು ಬಿ.ಪಿ.ಎಲ್. ಕುಟುಂಬಗಳಿಗೆ ಗ್ರಾಮೀಣ ಭಾಗದಲ್ಲಿ 1.20 ಲಕ್ಷ ರೂ. ಗಳಿಗೆ, ನಗರ ಭಾಗದಲ್ಲಿ 3 ಲಕ್ಷ ರೂ. ಗಳಿಗೆ ಆದಾಯ ಮಿತಿ ಹೆಚ್ಚಳ ಮಾಡಿದೆ ಎಂದು ಸೋಮಣ್ಣ ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 126 ಘೋಷಿತ ಕೊಳಚೆ ಪ್ರದೇಶಗಳು ಸೇರಿದಂತೆ ರಾಜ್ಯದಲ್ಲಿ 1821 ಪ್ರದೇಶಗಳಿದ್ದು, ಇಲ್ಲಿ 8620 ಎಕರೆ ಪ್ರದೇಶದಲ್ಲಿ ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕೊಳಚೆ ಪ್ರದೇಶಗಳಲ್ಲಿ ಮೂಲಸೌಲಭ್ಯ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸುವೆ ಎಂದು ಅವರು ಹೇಳಿದರು.

ಮಂಗಳಮುಖಿಯರಿಗೂ ಮನೆ: ಬೆಂಗಳೂರು ಸಮೀಪ ಕೆಂಗೇರಿಯಲ್ಲಿ ವಿಶೇಷವಾಗಿ ಮಂಗಳಮುಖಿಯರಿಗೆ 7 ಎಕರೆ ಪ್ರದೇಶದಲ್ಲಿ 150 ಕೋಟಿ ರೂ.ವೆಚ್ಚದಲ್ಲಿ 300 ಮನೆ ನಿರ್ಮಿಸಲಾಗುತ್ತಿದೆ. ಜಾತಿ, ಲಿಂಗ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಮನೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಸೋಮಣ್ಣ ತಿಳಿಸಿದರು.

ಹೆಣ್ಣು ಮಕ್ಕಳ ಹೆಸರಿಗೆ ಹಕ್ಕುಪತ್ರ ಕೊಡಿ: ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಸಂದರ್ಭದಲ್ಲಿ ಅಧಿಕಾರಿಗಳು ಹೆಣ್ಣು ಮಕ್ಕಳ ಹೆಸರಿಗೆ ಕೊಡಬೇಕು. ಇನ್ನು ಹಕ್ಕುಪತ್ರ ಪಡೆದವರು ಹಣ, ಇನ್ನಿತರ ಆಸೆಗೆ ಪರಭಾರೆ ಮಾಡಬಾರದು. ನಿಮ್ಮ ಸ್ವತ್ತು ನೀವೆ ಸಂರಕ್ಷಿಸಿಕೊಳ್ಳಬೇಕು ಎಂದು ಸ್ಲಂ ನಿವಾಸಿಗಳಿಗೆ ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಹಿಸಿದ್ದರು. ಸಂಸದ ಡಾ.ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಾಸಕ  ಡಾ.ಅವಿನಾಶ್ ಜಾಧವ್, ಮಾಜಿ ಎಂ.ಎಲ್.ಸಿ ಅಮರನಾಥ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News