ಅಗ್ನಿಪಥ್ ಯೋಜನೆ ಮರು ಚಿಂತನೆಗೆ ಕಾಂಗ್ರೆಸ್ ಒತ್ತಾಯ: ಡಾ.ಎಲ್.ಹನುಮಂತಯ್ಯ

Update: 2022-06-18 17:33 GMT

ಬೆಂಗಳೂರು, ಜೂ.18: ಕೇಂದ್ರ ಸರಕಾರವು ಯುವಕರನ್ನು ಸಶಸ್ತ್ರ ಸೇನಾ ಪಡೆಗಳಿಗೆ ಆಯ್ಕೆ ಮಾಡುವ ಅಗ್ನಿಪಥ್ ಯೋಜನೆಯನ್ನು ಇತ್ತೀಚೆಗೆ ಪ್ರಕಟಿಸಿದ್ದು, ಇದರ ವಿರುದ್ಧ ಇಡೀ ದೇಶದಲ್ಲಿ ಅದರಲ್ಲೂ ಹರಿಯಾಣ, ಬಿಹಾರ, ತೆಲಂಗಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ರೈಲುಗಳಿಗೆ ಬೆಂಕಿ ಹಾಕಲಾಗಿದ್ದು, ಸರಕಾರ ಈ ಯೋಜನೆ ಬಗ್ಗೆ ಮರು ಚಿಂತನೆ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಯೋಧರನ್ನು ಅಗ್ನಿ ವೀರರು ಎಂದು ಸರಕಾರ ಕರೆದಿದೆ. ಇವರಿಗೆ ಕೇವಲ 4 ವರ್ಷಗಳು ಮಾತ್ರ ಉದ್ಯೋಗ. ಈ ಅವಧಿಯಲ್ಲಿ ಸೇವಾನಿಧಿ ಪ್ಯಾಕೇಜ್ ಅನ್ನು 11.71 ಲಕ್ಷ ರೂ.ನಿಗದಿ ಮಾಡಿದೆ. ಸೇನೆಯಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ನೀಡದ ಯೋಜನೆ ಇದಾಗಿದೆ ಎಂದರು.

ಮೊದಲ ಹಂತದಲ್ಲಿ 46 ಸಾವಿರ ಯೋಧರ ಆಯ್ಕೆ. ನಮ್ಮ ದೇಶದಲ್ಲಿ ಅತಿಹೆಚ್ಚು ನಿರುದ್ಯೋಗ ಇದೆ ಎಂಬುದು ಎಲ್ಲ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಬಿಜೆಪಿ ಕಳೆದ 8 ವರ್ಷಗಳಲ್ಲಿ ಅನೇಕ ವಲಯಗಳಲ್ಲಿ ಅಂಕಿ ಅಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುತ್ತಿದೆ. ಈ ಎನ್‍ಡಿಎ ಸರಕಾರವನ್ನು ‘ನೋ ಡಾಟಾ ಅಕೌಂಟ್’ ಎಂದೇ ಕರೆಯಬೇಕಾಗಿದೆ ಎಂದು ಅವರು ಟೀಕಿಸಿದರು.

ನಿರುದ್ಯೋಗ ಸಮಸ್ಯೆ, ನಿರುದ್ಯೋಗಿಗಳ ಸಂಖ್ಯೆ ಕುರಿತು ಸಚಿವರು ಅಂಕಿ ಅಂಶ ಇಲ್ಲ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 4 ವರ್ಷಕ್ಕೆ ಈ ಯುವಕರನ್ನು ಆಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅವೈಜ್ಞಾನಿಕ, ಉದ್ಯೋಗ ಸಮಸ್ಯೆ ಬಗೆಹರಿಸದ, ಇನ್ನು ಹೆಚ್ಚು ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಇದಾಗಿದೆ. ನಾಲ್ಕು ವರ್ಷಗಳ ನಂತರ ಸೇವಾನಿಧಿ ಪ್ಯಾಕೇಜ್, ಅದರಲ್ಲಿ ಶೇ.25ರಷ್ಟು ಜನರನ್ನು ಉಳಿಸಿಕೊಂಡು ಅವರಿಗೆ ಕೌಶಲ್ಯ ಪ್ರಮಾಣಪತ್ರ ನೀಡುತ್ತಾರೆ. ಈ ಪ್ರಮಾಣಪತ್ರ ಇದ್ದರೆ ಬ್ಯಾಂಕುಗಳ ಮೂಲಕ ಸಾಲ ಸಿಗುತ್ತದೆ, ಸಾಲ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇದೆ ಎಂದು ಅವರು ತಿಳಿಸಿದರು.

ಈಗಾಗಲೇ ಸಾಕಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಕರಣ ಮಾಡಲಾಗುತ್ತಿದ್ದು, ಅವುಗಳನ್ನು ಮನಸೋಇಚ್ಛೇ ಬೆಲೆಗೆ ಮಾರುತ್ತಿದೆ. ಲಾಭದಾಯಕ ವಿಮಾನ ನಿಲ್ದಾಣಗಳನ್ನು ಅದಾನಿ ಸಂಸ್ಥೆಗೆ ನೀಡಲಾಗಿದೆ. ನಮ್ಮ ಸೇನಾ ವ್ಯವಸ್ಥೆಯನ್ನು ಖಾಸಗಿಕರಣ ಮಾಡುತ್ತಿರುವುದು ಅತ್ಯಂತ ಕಳವಳಕಾರಿಯಾದುದ್ದು. ರಕ್ಷಣಾ ವ್ಯವಸ್ಥೆಯನ್ನು ಉದ್ಯೋಗ ಸೃಷ್ಟಿ ಯೋಜನೆ ಎಂದು ಪರಿಗಣಿಸಬಾರದು ಎಂದು ಹನುಮಂತಯ್ಯ ಹೇಳಿದರು.

ಸರಕಾರದ ಎಲ್ಲ ವಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಈಗಾಗಲೇ ಸುಮಾರು 25 ಜನರನ್ನು ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದವರನ್ನು ನೇರ ನೇಮಕಾತಿ ಮೂಲಕ ನೇಮಿಸಿಕೊಂಡಿದೆ. ರಕ್ಷಣಾ ವಲಯದಲ್ಲಿ ಇಂತಹ ಪ್ರಯೋಗದಿಂದ ದೇಶದ ಭದ್ರತೆಗೆ ಅಪಾಯ ತಂದು, ಯೋಧರ ಭವಿಷ್ಯಕ್ಕೆ ಮಾರಕವಾದ ಯೋಜನೆ ಇದು ಎಂದು ಅನೇಕರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಯುವಕರು ಈ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದು, ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ವಲಯದಲ್ಲಿ ತಜ್ಞರು ಎಂದು ಕರೆಯಲ್ಪಡುವವರು ಏನು ಹೇಳುತ್ತಿದ್ದಾರೆ ಎಂದು ಸರಕಾರ ಗಮನಿಸಬೇಕು. ಈ ಯೋಜನೆ ಬಗ್ಗೆ ಅಧ್ಯಯನ ಮಾಡಿರುವವರು ಹೇಳುವ ಮಾತು ಕೇಳಿದರೆ ನಮಗೆ ಆತಂಕವಾಗುತ್ತದೆ ಎಂದು ಅವರು ಹೇಳಿದರು.

ಇಲ್ಲಿ ನಾಲ್ಕು ವರ್ಷ ಯೋಧರಾಗಿ ಹೊರಗೆ ಬಂದವರು ಏನನ್ನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ವ್ಯಾಪಕ ವಿರೋಧದ ನಂತರ ಶೇ.10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಹೇಳಲು ಆರಂಭಿಸಿದ್ದಾರೆ. ಈ ಯೋಜನೆ ಮೂಲಕ ಜನರ ಉದ್ಯೋಗದ ಹಕ್ಕನ್ನೇ ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಅಗ್ನಿಪಥ ಯೋಜನೆ ಮೂಲಕ ದೇಶವನ್ನು ಅಗ್ನಿಗೆ ಆಹುತಿಯಾಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಯುವಕರ ಪರವಾಗಿದ್ದು, ಅವರಿಗೆ ಉದ್ಯೋಗ ನೀಡುವುದರ ಪರವಾಗಿದೆ ಎಂದು ಅವರು ಹೇಳಿದರು.

ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಧರಣಿ

ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಯುವಕರ ಹೋರಾಟಕ್ಕೆ ಬೆಂಬಲಿಸಿ, ದಿಲ್ಲಿಯ ಜಂತರ್ ಮಂತರ್‍ನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರು ನಾಳೆ ಬೆಳಗ್ಗೆ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಪ್ರತಿಭಟನಾನಿರತ ಯುವಕರ ಪರವಾಗಿದೆ. ಅವರು ಶಾಂತಿ ಕಾಪಾಡಿಕೊಳ್ಳಬೇಕು, ಸರಕಾರ ನಿಲುವು ಬದಲಿಸಿಕೊಳ್ಳಬೇಕು, ಯೋಜನೆ ತಕ್ಷಣಕ್ಕೆ ಸ್ಥಗಿತಗೊಳಿಸಿ ಖಾಯಂ ಉದ್ಯೋಗ ನೀಡುವ ನಿಟ್ಟಿನಲ್ಲಿ ಆಲೋಚಿಸಬೇಕು.

ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News