ಚಾರ್ಲಿ ಸಿನಿಮಾ ಬಳಿಕ ಲ್ಯಾಬ್ರಡಾರ್ ಬೇಡಿಕೆ ಹೆಚ್ಚಳ !

Update: 2022-06-19 02:26 GMT
ಫೈಲ್‌ ಫೋಟೊ 

ಮಂಗಳೂರು: ಚಲನಚಿತ್ರ '777 ಚಾರ್ಲಿ' ಬಿಡುಗಡೆ ಬಳಿಕ ನಗರದಲ್ಲಿ ಲ್ಯಾಬ್ರಡಾರ್ ನಾಯಿಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಮಂಗಳೂರು ನಗರ ಪೊಲೀಸರು ಇತ್ತೀಚೆಗೆ ಶ್ವಾನಪಡೆಗೆ ಸೇರ್ಪಡೆಯಾದ ನಾಯಿಗೆ ಚಾರ್ಲಿ ಹೆಸರಿಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಈ ಚಿತ್ರವನ್ನು ನೋಡಿದಾಗ ಇತ್ತೀಚೆಗೆ ಅಸು ನೀಗಿದ ತಮ್ಮ ಸಾಕು ನಾಯಿಯನ್ನು ನೆನೆದು ಕಣ್ಣೀರಿಟ್ಟಿದ್ದರು. ಚಿತ್ರದ ಬಳಿಕ ಇದೀಗ ಈ ತಳಿಯ ನಾಯಿಯ ಬೆಲೆ ರೂ. 9 ಸಾವಿರದಿಂದ 12-13 ಸಾವಿರಕ್ಕೆ ಹೆಚ್ಚಿದೆ.

ಮಿಸ್ಟರ್ ರೆಸ್ಕ್ಯೂವರ್ ಸಂಸ್ಥಾಪಕ ಮತ್ತು ಪ್ರಾಣಿಗಳ ಪರ ಹೋರಾಟಗಾರ ತೌಫೀಕ್ ಅಹ್ಮದ್ ಅವರು ಹೇಳುವಂತೆ '777 ಚಾರ್ಲಿ' ಚಿತ್ರ ಬಿಡುಗಡೆ ಬಳಿಕ ಲ್ಯಾಬ್ರಡಾರ್ ನಾಯಿಮರಿಗಳಿಗೆ ಬೇಡಿಕೆ ಹೆಚ್ಚಿರುವುದು ಋಣಾತ್ಮಕ ಪರಿಣಾಮ ಬೀರಲಿದೆ. "ಜನ ಅನೈತಿಕ ಬ್ರೀಡರ್‌ ಗಳಿಂದ ಮರಿಗಳನ್ನು ಖರೀದಿಸಲು ಹೊರಟಾಗ ಚಿತ್ರದ ಉದ್ದೇಶವೇ ವಿಫಲವಾಗುತ್ತದೆ. ಇದೀಗ ಲ್ಯಾಬ್ರಡಾರ್ ತಳಿಯನ್ನೇ ಜನ ನಿರ್ದಿಷ್ಟವಾಗಿ ಬ್ರೀಡರ್‌ ಗಳ ಬಳಿ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಸ್ಥಳೀಯವಾಗಿ ಮರಿಗಳು ಲಭ್ಯವಿಲ್ಲದಿದ್ದಾಗ, ಇತರ ನಗರಗಳಿಂದ ಅಮಾನವೀಯ ಸ್ಥಿತಿಯಲ್ಲಿ ಅವುಗಳನ್ನು ಸಾಗಾಟ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಚಿತ್ರದ ಬಳಿಕ ಲ್ಯಾಬ್ರಡಾರ್ ತಳಿಯ ಮರಿಗಳಿಗೆ ಬೇಡಿಕೆ ನಿಶ್ಚಿತವಾಗಿ ಹೆಚ್ಚಿದೆ. ಗಂಡುಮರಿಗಳ ದರ 12- 13 ಸಾವಿರ ಇದ್ದರೆ, ಹೆಣ್ಣು ಮರಿಗಳಿಗೆ 8000 ರೂಪಾಯಿ ಬೆಲೆ ಇದೆ ಎಂದು ಬೂ ವಾಗ್ಗಿ ಕೆನೆಲ್‍ನ ಕ್ಯಾಲೆನ್ ಡಿಸೋಜಾ ಹೇಳುತ್ತಾರೆ.

ಚಿತ್ರ ನೋಡಿದ ಬಳಿಕ ಜನ ಭಾವುಕರಾಗುತ್ತಿದ್ದಾರೆ. ಆದರೆ ನಗರದಲ್ಲಿ ಲ್ಯಾಬ್ರಡಾರ್‌ ಗಳ ಬೇಡಿಕೆ ವಾಸ್ತವವಾಗಿ ಹೆಚ್ಚಿದೆಯೇ ಎಂದು ಖಚಿತಪಡಿಸಲು ಇನ್ನೂ ಸ್ವಲ್ಪ ಸಮಯ ಬೇಕು ಎಂದು ಪೆಟ್ಸ್ ಆ್ಯಂಡ್ ಪಾವ್ಸ್ ನ ಸ್ವರೂಪ್ ಶೆಟ್ಟಿ ಹೇಳುತ್ತಾರೆ. ‌

ಕೆಲ ವರ್ಷಗಳ ಹಿಂದೆ ಜಾಹೀರಾತೊಂದರಲ್ಲಿ ಪಗ್ಸ್ ತಳಿ ಕಾಣಿಸಿಕೊಂಡಿದ್ದಾಗ ಆ ತಳಿಯ ಬೇಡಿಕೆಯಲ್ಲೂ ಇಂಥದ್ದೇ ಏರಿಕೆ ಕಂಡುಬಂದಿತ್ತು ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News