ಬೆಳಗಾವಿ | ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿ ಹಿಂಸಾಚಾರ: ಓರ್ವ ಯುವಕನ ಕೊಲೆ

Update: 2022-06-19 04:25 GMT

ಬೆಳಗಾವಿ, ಜೂ.19: ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಸಮುದಾಯಗಳ ನಡುವಿನ ಗಲಾಟೆಯು ಹಿಂಸಾಚಾರದ ಸ್ವರೂಪ ಪಡೆದು ಓರ್ವ ಯುವಕ ಕೊಲೆಯಾದ ಘಟನೆ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಗೌಂಡವಾಡ ಗ್ರಾಮದ ಮುಖಂಡ ಸತೀಶ್ ಪಾಟೀಲ್(7) ಕೊಲೆಯಾದ ಯುವಕ. ಇವರು ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು ಪರವಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರೆನ್ನಲಾಗಿದೆ.

ಈ ಗ್ರಾಮದಲ್ಲಿ ಐದು ವರ್ಷಗಳಿಂದ ಬೋರೇನಾಥ ದೇವಸ್ಥಾನದ ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಸಮುದಾಯಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತೆನ್ನಲಾಗಿದೆ. ದೇವಸ್ಥಾನದ ಜಾಗವನ್ನು ಅತಿಕ್ರಮಣ ಮಾಡಿ ವ್ಯಕ್ತಿಯೊಬ್ಬರು ಮನೆ ಕಟ್ಟಿದ್ದಾರೆ ಎಂಬ ಬಗ್ಗೆ ಐದು ವರ್ಷಗಳ ಹಿಂದೆ ಜಗಳ ನಡೆದಿತ್ತು. ಮುಂದೆ ಅದು ಎರಡು ಸಮುದಾಯಗಳ ನಡುವಿನ ವೈಷಮ್ಯವಾಗಿ ಮಾರ್ಪಟ್ಟಿತ್ತು. ಶನಿವಾರ ತಡರಾತ್ರಿ ಕಾರು ಪಾರ್ಕಿಂಗ್ ವಿಚಾರವಾಗಿ ಈ ಎರಡು ಸಮುದಾಯಗಳಿಗೆ ಸೇರಿದ ಇಬ್ಬರ ಮಧ್ಯೆ ಉಂಟಾದ ವಾಗ್ವಾದ ಗಲಾಟೆಗೆ ತಕ್ಷಣದ ಕಾರಣ ಎಂದು ತಿಳಿದುಬಂದಿದೆ. ಬಳಿಕ ಈ ಸಣ್ಣ ಗಲಾಟೆ ಹಿಂಸಾಚಾರವಾಗಿ ಮಾರ್ಪಟ್ಟಿತು. ಹೊಡೆದಾಟದಲ್ಲಿ ಗೌಂಡವಾಡ ಗ್ರಾಮದ ಮುಖಂಡರಾಗಿದ್ದ ಸತೀಶ್ ಪಾಟೀಲ್ ಅವರನ್ನು ಹೊಡೆದು ಕೊಲೆಗೈಯಲಾಗಿದೆ.

 ಸತೀಶ್ ಹತ್ಯೆಯಿಂದ ರೊಚ್ಚಿಗೆದ್ದ ಅವರ ಸಮುದಾಯಕ್ಕೆ ಸೇರಿದ ಕೆಲವು ಉದ್ರಿಕ್ತರು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು. ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೊ, ಮೂರು ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದವು. ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆಯಿತು.

ಇದರಿಂದ ತಡರಾತ್ರಿಯ ವೇಳೆ ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ, ಪಿ.ವಿ.ಸ್ನೇಹಾ, ಗ್ರಾಮೀಣ ಎಸಿಪಿ ಗುಡಾಜಿ ಹಾಗೂ ಕಾಕತಿ ಇನ್ ಸ್ಪೆಕ್ಟರ್ ಗುರುನಾಥ ನೇತೃತ್ವದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಕೂಡಾ ಇಂದು ನಸುಕಿನ 2 ಗಂಟೆ ವೇಳೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದರು.

20 ಮಂದಿಯ ಬಂಧನ, ಪರಿಸ್ಥಿತಿ ನಿಯಂತ್ರಣದಲ್ಲಿ: ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ

ಗೌಂಡವಾಡ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಗೆ ಸಂಬಂಧಿಸಿ  ಐವರು ಆರೋಪಿಗಳನ್ನು ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿ 15 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಸತೀಶ್ ಪಾಟೀಲ್ ಕೊಲೆ ಇಬ್ಬರು ವ್ಯಕ್ತಿಗಳ ಮಧ್ಯೆ ಕಾರು ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದ್ದು. ಮೇಲ್ನೋಟಕ್ಕೆ ಇದು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಜನರು ಆತಂಕಿತರಾಗಬೇಕಿಲ್ಲ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಸಂಯಮದಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News