×
Ad

ದುಬಾರೆ ಪ್ರವಾಸಿ ತಾಣದಲ್ಲಿ ಅಪಾಯದ ಕರೆಗಂಟೆ: ತೂಗು ಸೇತುವೆ ನಿರ್ಮಿಸಲು ನಾಗರಿಕರಿಂದ ಒತ್ತಾಯ

Update: 2022-06-19 18:42 IST

ಮಡಿಕೇರಿ ಜೂ.19 : ದೇಶ ವಿದೇಶಗಳ ಗಮನ ಸೆಳೆದಿರುವ ಕೊಡಗಿನ ಪ್ರಕೃತಿದತ್ತ ಪ್ರವಾಸಿತಾಣ ದುಬಾರೆ ಈಗ ಅಪಾಯದ ಕರೆಗಂಟೆಯನ್ನು ಬಾರಿಸುತ್ತಿದೆ. ನದಿಯನ್ನು ದಾಟಲು ಬೋಟ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಜೀವವನ್ನು ಕೈಯಲ್ಲಿಡಿದುಕೊಂಡು ಆತಂಕದ ನಡಿಗೆಯಲ್ಲೇ ಸಾಗಬೇಕಾದ ದುಸ್ಥಿತಿ ಪ್ರವಾಸಿಗರಿಗೆ ಬಂದೊದಗಿದೆ.

ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ನೆಚ್ಚಿನ ತಾಣ ದುಬಾರೆ ಸಾಕಾನೆ ಶಿಬಿರದೆಡೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಪ್ರವಾಸಿಗರಿಂದ ತಲಾ ರೂ.50 ರಂತೆ ಪ್ರವೇಶ ಶುಲ್ಕವನ್ನು ಕೂಡ ಸಂಗ್ರಹಿಸಲಾಗುತ್ತಿದೆ. ಆದರೆ ಪ್ರವಾಸಿಗರ ಜೀವಕ್ಕೆ ಪ್ರವಾಸಿಗರೇ ಜವಾಬ್ದಾರಿ ಎನ್ನುವ ಪರಿಸ್ಥಿತಿ ಇಲ್ಲಿದೆ. 

ಮಳೆಗಾಲ ಆರಂಭವಾಗಿ ಮೂರು ವಾರಗಳೇ ಕಳೆದಿದ್ದರೂ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ ಉತ್ತಮ ಮಳೆಯಾಗಿಲ್ಲ. ಹಿಂದಿನ ವರ್ಷಗಳಂತೆ ವರಣನಾರ್ಭಟ ಈ ಬಾರಿಯೂ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಕಾವೇರಿ ನದಿ ತುಂಬಿ ಹರಿಯಬೇಕಾಗಿತ್ತು. ಆದರೆ ಮಳೆಯ ಕೊರತೆಯಿಂದ ನದಿಯಲ್ಲಿ ನೀರೇ ಇಲ್ಲದಿರುವುದರಿಂದ ದುಬಾರೆಗೆ ತೆರಳಲು ಬೋಟ್ ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕ್ಷೀಣಿಸಿರುವ ನೀರಿನ ನಡುವೆ ಬಂಡೆಗಳ ಮೇಲೆ ಎಚ್ಚರಿಕೆಯ ಹೆಜ್ಜೆಗಳನ್ನಿರಿಸಿ ಸಾಗಬೇಕಾದ ಅನಿವಾರ್ಯತೆ ಇಲ್ಲಿದೆ. ನದಿಯಲ್ಲಿನ ಕಲ್ಲುಗಳು ಜಾರುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ ಎನ್ನುವಂತಾಗಿದೆ. ವಯೋವೃದ್ಧರು, ಮಹಿಳೆಯರು, ಮಕ್ಕಳು ಹೆಚ್ಚು ಅಪಾಯವನ್ನು ಎದುರಿಸುತ್ತಿದ್ದಾರೆ. ಪ್ರವಾಸಿಗರು ಬಿದ್ದಿರುವ ಘಟನೆಗಳೂ ನಡೆದಿದೆ.

ಪ್ರವಾಸಿಗರಿಂದ ಶುಲ್ಕ ಪಡೆಯುವ ಅರಣ್ಯ ಇಲಾಖೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸಿದೆ. ದುಬಾರೆ ನಂಜರಾಯಪಟ್ಟಣ ಗ್ರಾ.ಪಂ ಗೆ ಒಳಪಡುತ್ತಿದ್ದು, ಪಂಚಾಯತ್ ಆಡಳಿತ ಕೂಡ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ತೂಗು ಸೇತುವೆ ಬೇಕು 

ನದಿಯಲ್ಲಿ ನೀರಿಲ್ಲದಿದ್ದಾಗ ದುಬಾರೆಗೆ ಹೋಗಿ ಬರುವುದು ಎಷ್ಟು ಅಪಾಯಕಾರಿಯೋ ನೀರು ತುಂಬಿ ಹರಿಯುವಾಗಲೂ ಅಷ್ಟೇ ಅಪಾಯಕಾರಿಯಾಗಿದೆ. ಬೋಟ್ ಗಳ ಮೂಲಕ ಸಾಗುವಾಗಲೂ ಅಪಾಯ ಸಂಭವಿಸುವ ಸಾಧ್ಯತೆಗಳಿದೆ. ಆದ್ದರಿಂದ ತೂಗು ಸೇತುವೆ ನಿರ್ಮಾಣದ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ತೂಗು ಸೇತುವೆ ಯೋಜನೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಲಾಗಿತ್ತಾದರೂ ಅರಣ್ಯ ಇಲಾಖೆಯ ಆಕ್ಷೇಪದಿಂದ ಇದು ನೆನೆಗುದಿಗೆ ಬಿದ್ದಿದೆ, ಅಲ್ಲದೆ ಅನುದಾನ ಮರಳಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಆದರೆ ಪ್ರವಾಸಿತಾಣಗಳ ಅಭಿವೃದ್ಧಿಗೆ ಯಾರೂ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಂಜರಾಯಪಟ್ಟದಿಂದ ದುಬಾರೆವರೆಗಿನ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ ಅನುಕೂಲ ಕಲ್ಪಿಸಲಾಗಿದೆ. ನದಿ ದಡದಲ್ಲೂ ಪ್ರವಾಸಿಗರ ಅನುಕೂಲಕ್ಕಾಗಿ ಕೆಲವು ಅನುಕೂಲಗಳನ್ನು ಕಲ್ಪಿಸಲಾಗಿದೆ. ಆದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ತೂಗು ಸೇತುವೆಯನ್ನು ಕಲ್ಪಿಸಿಲ್ಲ ಎನ್ನುವ ಕೊರಗು ಇದೆ.

ಪ್ರವಾಸಿಗರು ಕೂಡ ಇಲ್ಲಿ ತೂಗು ಸೇತುವೆ ಇದ್ದರೆ ಉತ್ತಮ ಮತ್ತು ಸುರಕ್ಷಿತ ಎಂದು ಅಭಿಪ್ರಾಯಪಡುತ್ತಾರೆ. ಪ್ರವಾಸೋದ್ಯಮದ ಪರ ಮಾತನಾಡುವ ಶಾಸಕರು ಈ ಬಗ್ಗೆ ಸ್ವಯಂ ಆಸಕ್ತಿ ತೋರಿ ತೂಗು ಸೇತುವೆ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸೂಕ್ತ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News