ದೇಶಾದ್ಯಂತ ಮನುವಾದವನ್ನು ಜಾರಿ ಮಾಡುವ ಹುನ್ನಾರ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-06-19 16:47 GMT

ಬೆಂಗಳೂರು, ಜೂ. 19: ‘ಇತ್ತೀಚೆಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ತತ್ವಗಳನ್ನು ಗಾಳಿಗೆ ತೂರಿ, ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕಡೆಗಣಿಸಿ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಆಡಳಿತ ನಡೆಸುವ ಸರಕಾರಗಳು ಜಾರಿ ಮಾಡುತ್ತಿವೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ದಸಂಸ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಧಾರ್ಮಿಕ ಹಕ್ಕನ್ನು ಕಡೆಗಣಿಸಿ, ಸುಗ್ರೀವಾಜ್ಞೆಯ ಮೂಲಕ ಮತಾಂತರ ನಿಷೇಧಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹಾಗೆಯೇ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಮುಸ್ಲಿಮರ ಪರ ದ್ವನಿ ಎತ್ತಿದರೆ ಹಿಂದೂ ವಿರೋಧಿಗಳು ಎಂಬ ಪಟ್ಟ ಕಟ್ಟುತ್ತಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದರು.

‘ಕೋಮುವಾದದ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದನ್ನು ಸಹಿಸುತ್ತಾ ಕುಳಿತರೆ ಹೆಚ್ಚಿನ ದಿನ ಸಂವಿಧಾನ ಉಳಿಯುವುದಿಲ್ಲ. ಆರೆಸ್ಸೆಸ್ ಎಲ್ಲ ಸಂಸ್ಥೆಗಳನ್ನು ಕೇಸರಿಕರಣ ಮಾಡುತ್ತಿದೆ. ದೇಶಾದ್ಯಂತ ಮನುವಾದವನ್ನು ಜಾರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು. 

ಪಠ್ಯಪರಿಷ್ಕರಣೆಯ ನೆಪದಲ್ಲಿ ಶಿಕ್ಷಣವನ್ನೂ ಕೇಸರಿಕರಣ ಮಾಡುತ್ತಿದ್ದಾರೆ. ಹಾಗಾಗಿ ಮೊದಲ ಬಾರಿಗೆ ಕನ್ನಡದ ಲೇಕಕರು ತಮ್ಮ ಪಾಠವನ್ನು ನೂತನ ಪಠ್ಯದಿಂದ ಕೈ ಬಿಡುವಂತೆ ಒತ್ತಡವೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್, ದಸಂಸ ಮುಖಂಡ ಡಿ.ಜಿ.ಸಾಗರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News