ಮೋದಿ ಸರಕಾರದಿಂದ ದೇಶದ ಯುವಕರ ಭವಿಷ್ಯ ಹಾಳು: ಶಾಸಕ ಪ್ರಿಯಾಂಕ್ ಖರ್ಗೆ

Update: 2022-06-19 14:56 GMT

ಕಲಬುರಗಿ, ಜೂ.19: ಸೇನಾ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದ ನೂರಾರು ರೈಲುಗಳು ಬಂದ್ ಆಗಿವೆ. ಹಲವಾರು ರೈಲುಗಳು, ರೈಲ್ವೆ ನಿಲ್ದಾಣ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕರ್ನಾಟಕದಲ್ಲೂ ಸೇನಾಕಾಂಕ್ಷಿಗಳು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದರಿಂದ, ದೇಶದ ಯುವಕರ ಭವಿಷ್ಯ ಹಾಳು ಮಾಡಲು ಪ್ರಧಾನಿ ಮೋದಿ ಸರಕಾರ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರವಿವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅಗ್ನಿವೀರರ ಯೋಜನೆ ಅನ್ವಯ ಹೊಸ ಸೈನಿಕರನ್ನ ಆರು ತಿಂಗಳ ತರಬೇತಿ ನೀಡಿ, ಅಗ್ನಿವೀರರ ಹೆಸರನಲ್ಲಿ ಅವರನ್ನು ನೌಕಾದಳ, ಭೂದಳ ಹಾಗೂ ವಾಯುದಳದ ಸೈನಿಕರನ್ನಾಗಿ 64 ಸಾವಿರ ಸೈನಿಕರನ್ನ ನೇಮಕ ಮಾಡಿ ನಾಲ್ಕು ವರ್ಷದ ಬಳಿಕ ಅವರನ್ನು ಸೇವೆಯಿಂದ ನಿವೃತ್ತಿಗೊಳಿಸುತ್ತಾರೆ. ಆಗ ಶೆ.75 ಸೇವಾ ಕಮಿಷನ್ ನೀಡುತ್ತಾರೆ. ಇದಕ್ಕೆ ಮಾಜಿ ಸೈನಿಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. 

ಈ ಯೋಜನೆ ಜಾರಿಗೆ ತರುವ ಮುನ್ನ ಪೈಲಟ್ ಪ್ರಾಜೆಕ್ಟ್ ಮಾಡಬೇಕಿತ್ತು. ಯಾಕೆಂದರೆ ಭಾರತವು ಪಾಕಿಸ್ತಾನ, ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿ ಹಂಚಿಕೊಂಡಿದೆ. ಚೀನಾ ಸೈನಿಕರು ಈಗಾಗಲೇ ಭಾರತದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಾಣ ಮಾಡಿದ್ದಾರೆ. ಹೀಗಿರುವಾಗ, ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ನೇಮಿಸುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಎದ್ದಿದೆ ಎಂದರು.

ಪ್ರಧಾನಿ ಮೋದಿ ಅವರ ಆಡಳಿತದ ಎಂಟು ವರ್ಷದ ಸಾಧನೆಗಳ ಬಗ್ಗೆ ಬಹಳ ವಿಜೃಂಭಣೆಯಿಂದ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಚರಿಸುತ್ತಿವೆ. ಸಂವಿಧಾನದ ಎಲ್ಲ ಆಶಯ ಹಾಗೂ ತಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ರೈತರೇ ರಸ್ತೆಗಿಳಿದು ಹೋರಾಟ ನಡೆಸಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮಾಡಿದರು. ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದರೇ ನಮಗೆ ಬೇಸರವಾಗುತ್ತದೆ. ಕಾರಣ ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದನ್ನ ಇವರು ಮಾಧ್ಯಮದಲ್ಲಿ ಡಿಫೆಂಡ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಅಮಿತ್ ಶಾ ವಿರುದ್ಧ ಕಿಡಿ: ಅಗ್ನಿಪಥ ಯೋಜನೆ ವಿರೋಧಿಸಿ ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದರೂ ಗೃಹ ಸಚಿವ ಅಮಿತ್ ಶಾ ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ. ಗಲಾಟೆಗಳಾದರೂ ಒಂದೇ ಒಂದು ಹೇಳಿಕೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. 

ತಾಕತ್ತಿದ್ರೆ ಮೋದಿ ‘ಅಗ್ನಿಪಥ್’ ಬಗ್ಗೆ ಸುದ್ದಿಗೋಷ್ಟಿ ಮಾಡಲಿ: ಪ್ರಧಾನಿ ಮೋದಿಯವರು ಯುವಕರ ದಾರಿಗೆ ದೀಪ ಆಗುವುದನ್ನು ಬಿಟ್ಟು, ವಿವಾದ ಸೃಷ್ಟಿಸುವಂತಹ ಅಗ್ನಿಫಥ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜೂ.20ರಂದು ಬೆಂಗಳೂರಿಗೆ ಮೋದಿ ಬರುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮೋದಿ ಅವರು ಒಂದೇ ಒಂದು ಸುದ್ದಿಗೋಷ್ಟಿಯನ್ನೂ ಮಾಡಿಲ್ಲ. ಅವರಿಗೆ ತಾಕತ್ತಿದ್ರೆ, ಸುದ್ದಿಗೋಷ್ಟಿಯನ್ನು ಮಾಡಿ, ಅಗ್ನಿಪಥ್ ಬಗ್ಗೆ ಸಿಎಂ, ಕಟೀಲ್ ಅವರಿಗೆ ಮನವರಿಕೆ ಮಾಡಿಕೊಡಲಿ'

-ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News